ಗಿರೀಶ್ ಕಾಸರವಳ್ಳಿಯವರು 1978ರಲ್ಲಿ ನಿರ್ದೇಶಿಸಿದ್ದ ಡಾ.ಯು. ಆರ್. ಅನಂತಮೂರ್ತಿಯವರ ಕತೆ ಆಧರಿಸಿದ ಚಿತ್ರ ಘಟಶ್ರಾದ್ಧ ಹಲವು ಪ್ರಥಮಗಳನ್ನು ಕನ್ನಡಕ್ಕೆ ತಂದುಕೊಟ್ಟ ಚಿತ್ರ. 90 ವರ್ಷಗಳ ಕನ್ನಡ ಚಿತ್ರ ಇತಿಹಾಸದಲ್ಲಿ ಕನ್ನಡದ ಆರು ಚಿತ್ರಗಳಿಗೆ ಮಾತ್ರ ರಾಷ್ಟ್ರಪ್ರತಿಗಳ ಸ್ವರ್ಣ ಕಮಲ ಲಭ್ಯವಾಗಿದ್ದು, ಅವುಗಳಲ್ಲಿ ನಾಲ್ಕು ಕಾಸರವಳ್ಳಿ ನಿರ್ದೇಶನದ ಚಿತ್ರಗಳಾಗಿವೆ. ಘಟಶ್ರಾದ್ಧ ಆ ಸರಣಿಯಲ್ಲಿ ಮೊದಲನೆಯದು. ಭಾರತೀಯ ಸಿನಿಮಾದ ಶತಮಾನೋತ್ಸವ ಸಂಧರ್ಭದಲ್ಲಿ ಶತಮಾನದ 20 ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿತವಾದ ಈ ಚಿತ್ರ ಅನೇಕ ಅಂತಾರಾಷ್ಟೀಯ ಮನ್ನಣೆಗಳಿಸಿತ್ತು. ಇದೀಗ ಅದಕ್ಕೆ ಪುನರುಜ್ಜೀವನದ ಅವಕಾಶ ಸಿಕ್ಕಿದೆ.

ಜಾಗತಿಕ ಸಿನಿಮಾದ ಶ್ರೇಷ್ಠ ನಿರ್ದೇಶಕರೊಲ್ಲೊಬ್ಬರಾದ ಹಾಲಿವುಡ್ ಚಿತ್ರರಂಗದ ಮಾರ್ಟಿನ್ ಸ್ಕಾರ್ಸೆಸಿಯವರ ಸಿನಿಮಾ ಫೌಂಡೇಷನ್ ಮತ್ತು ಶಿವೇಂದ್ರ ಸಿಂಗ್ ಅವರ ಫಿಲ್ಮ್ ಹೆರಿಟೇಜ್ ಫೌಂಡೇಷನ್ ಜಂಟಿಯಾಗಿ ಕೈಗೆತ್ತಿಕೊಂಡಿರುವ ಈ ಪ್ರಾಜೆಕ್ಟ್‌ಗೆ ಕೈಜೋಡಿಸಿದ ಸಂಸ್ಥೆ ಹಾಲಿವುಡ್ ಚಿತ್ರರಂಗದ ಸ್ಟಾರ್‌ವಾರ್ಸ್ ಚಿತ್ರ ಸರಣಿಯ ನಿರ್ದೇಶಕ ಜಾರ್ಜ್ ಲ್ಯೂಕಾಸ್ ತಮ್ಮ ಪತ್ನಿಯ ಜೊತೆ ಸೇರಿ ರೂಪಿಸಿದ ಹಾಬ್ಸನ್- ಲ್ಯೂಕಾಸ್ ಫೌಂಡೇಶನ್.
ಮಾರ್ಟಿನ್ ಸ್ಕಾರ್ಸೆಸಿಯವರ ಸಿನಿಮಾ ಫೌಂಡೇಷನ್‌ನ ವಿಶ್ವ ಸಿನಿಮಾ ಪ್ರಾಜೆಕ್ಟ್‌ನಲ್ಲಿ ಜಾಗತಿಕ ಸಿನಿಮಾ ರಂಗದಲ್ಲಿನ ಶ್ರೇಷ್ಠ ಚಿತ್ರಗಳನ್ನು ಹುಡುಕಿ ಅವುಗಳ ಪುನರುಜ್ಜೀವನ ಮಾಡುತ್ತಿದೆ.

ಆ ಯೋಜನೆಯಲ್ಲಿ ಭಾರತದಿಂದ ಆಯ್ಕೆಯಾದ ಮೂರನೆಯ ಚಿತ್ರ ಘಟಶ್ರಾದ್ಧ. ಈಗಾಗಲೇ ಅವರು ಅರವಿಂದನ್ ನಿರ್ದೇಶನದ ಮಲೆಯಾಳಂ ಚಿತ್ರ ‘ತಂಪ್’ ಹಾಗೂ ಅರಿಭಾಮ್ ಶ್ಯಾಂ ಶರ್ಮ ಅವರ ಮಣಿಪುರಿ ಭಾಷೆಯ ‘ಇಶಾನು’ ಚಿತ್ರಗಳ ಪುನರುಜ್ಜೀವನವನ್ನು ಕೈಗೆತ್ತಿಕೊಂಡಿತ್ತು. ಈ ಎರಡೂ ಚಿತ್ರಗಳೂ ಈ ವರ್ಷದ ಕ್ಯಾನೆ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದವು.

ಈ ಸಾಲಿನ ಬಿ.ವಿ.ಕಾರಂತ ಪ್ರಶಸ್ತಿ ಪಡೆದ ಖ್ಯಾತ ರಂಗಕರ್ಮಿ ಸದಾನಂದ ಸುವರ್ಣ ನಿರ್ಮಿಸಿದ ಈ ಚಿತ್ರಕ್ಕೆ ಎಸ್.ರಾಮಚಂದ್ರ ಐತಾಳ್‌ರ ಛಾಯಾಗ್ರಹಣ, ಬಿ.ವಿ.ಕಾರಂತರ ಸಂಗೀತ. ಕೆ.ವಿ.ಸುಬ್ಬಣ್ಣನವರ ಕಲಾನಿರ್ದೇಶನ ಇದ್ದು ಮೀನಾ, ಅಜಿತ್ ಕುಮಾರ್, ನಾರಾಯಣ ಭಟ್, ಬಿ. ಸುರೇಶ ಮೊದಲಾದವರ ಅಭಿನಯವಿತ್ತು. ಈ ಚಿತ್ರದ ಪುನರುಜ್ಜೀವನ ಮಾಡಲು ಕಾಸರವಳ್ಳಿಯವರ ಚಿತ್ರಗಳ ಬಗ್ಗೆ ವಿಶೇಷ ಒಲವು ಇರುವ ಶಿವೇಂದ್ರ ಸಿಂಗ್ ಅವರ ಫಿಲ್ಮ್ ಹೆರಿಟೇಜ್ ಫೌಂಡೇಷನ್‌ನ ಶ್ರಮ ಉಲ್ಲೇಖಾರ್ಹವಾಗಿದೆ. ಕಾಸರವಳ್ಳಿಯವರು ತಮ್ಮೆಲ್ಲ ಚಿತ್ರಗಳ ಹಾಗೂ ಚಿತ್ರ ಸಾಮಗ್ರಿಗಳನ್ನು ಈ ಫೌಂಡೇಷನ್‌ಗೆ ನೀಡಿದ್ದು ಆ ಸಂಸ್ಥೆ ಆ ಸಾಮಗ್ರಿಗಳನ್ನು ಎಚ್ಚರದಿಂದ ಸಂರಕ್ಷಿಸುವ ಹೊಣೆ ಹೊತ್ತಿದೆ.

By admin

Leave a Reply

Your email address will not be published. Required fields are marked *

Verified by MonsterInsights