Freedom TVಜಿಲ್ಲೆಸುದ್ದಿ
ಲಿಂಗ ಸಮಾನತೆಗೆ ಸಾಕ್ಷಿಯಾದ ಬೀರೂರು: ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಪುತ್ರಿಯರು

ಚಿಕ್ಕಮಗಳೂರು ; ಬೀರೂರಿನ ಭಾವಸಾರ ಸಮಾಜದ ನಿವಾಸಿ ಬಿ.ಎಸ್. ವಿಶ್ವನಾಥ್ ಅವರು ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದರು. ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ, ಸಾಮಾನ್ಯವಾಗಿ ದೂರದ ಪುರುಷ ಸಂಬಂಧಿಕರು ಅಂತಿಮ ವಿಧಿವಿಧಾನಗಳನ್ನು ಮಾಡಬೇಕಿತ್ತು. ಆದರೆ, ಅವರ ಪುತ್ರಿ ಐಶ್ವರ್ಯಾ ಅವರು ಈ ಸಂಪ್ರದಾಯದ ಬೇಲಿಯನ್ನು ಮುರಿಯಲು ನಿರ್ಧರಿಸಿದರು. ತಂದೆಯ ಮೇಲಿನ ಪ್ರೀತಿ ಮತ್ತು ಜವಾಬ್ದಾರಿಯನ್ನು ಅರಿತ ಅವರು, ತಾವೇ ಅಂತಿಮ ಕಾರ್ಯಗಳನ್ನು ಪೂರೈಸಲು ಮುಂದಾದರು.
ಕುಟುಂಬದ ಹಿರಿಯರ ಸಮ್ಮತಿ ಪಡೆದ ಐಶ್ವರ್ಯಾ, ತಮ್ಮ ತಂಗಿಯ ಜೊತೆಗೂಡಿ ಶುಕ್ರವಾರ ಬೀರೂರಿನ ಹಿಂದೂ ರುದ್ರಭೂಮಿಯಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು. ಹೆಗಲ ಮೇಲೆ ಮಣ್ಣಿನ ಕುಡಿಕೆ ಹೊತ್ತು ಮೃತದೇಹದ ಸುತ್ತ ಪ್ರದಕ್ಷಿಣೆ ಬರುವ ಮೂಲಕ ಧಾರ್ಮಿಕ ವಿಧಿಗಳನ್ನು ಪೂರೈಸಿದ ಐಶ್ವರ್ಯಾ ಅವರ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.




