ಗಂಗಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸ್ಥಳೀಯ ಕೈ ನಾಯಕರಿಂದಲೇ 2023ರ ವಿಧಾನಸಭೆ ಚುನಾವಣೆ ಯಲ್ಲಿ ಸೋಲಾಯಿತು ಎನ್ನುವ ಆಡಿಯೋ ವೈರಲ್ ಆಗಿದ್ದೇ ತಡ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತು ಕೊಂಡಿದೆ. ಗಂಗಾವತಿಯ ಸದ್ಯದ ಶಾಸಕ ಕೆಆರ್‌ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ಗಾಲಿಯವರಿಗೆ ಗಾಳ ಹಾಕಿದೆ.
ಕೊಪ್ಪಳದ ಗಂಗಾವತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದ ಇಕ್ಬಾಲ್ ಅನ್ಸಾರಿ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳಿದ್ದರೂ ಜಿಲ್ಲೆಯ ಕೈ ನಾಯಕರೇ ಅವರ ಸೋಲಿಗೆ ಕಾರಣರಾದರು ಎನ್ನುವ ಅಸಮಾಧಾನವನ್ನು ಅನ್ಸಾರಿ ಮೊನ್ನೆ ಹೊರಹಾಕಿದ್ದರು. ಕೆಆರ್‌ಪಿ ಪಕ್ಷದ ಅಭ್ಯರ್ಥಿ ಜನಾರ್ಧನ ರೆಡ್ಡಿಯವರ ಜೊತೆ “ಹೊಂದಾಣಿಕೆ ” ಮಾಡಿಕೊಂಡು ಚುನಾವಣೆಯಲ್ಲಿ ಹಣಿಯುವ ಹವಣಿಕೆ ಮಾಡಿ ಅದರಲ್ಲಿ ಗೆದ್ದಿರುವ ಸ್ಥಳೀಯ ಕೈ ನಾಯಕರಿಗೆ ಅಲ್ಪಸಂಖ್ಯಾತ ಬಂಧುಗಳು ತಕ್ಕ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ. ಪ್ರತಿಯೊಬ್ಬ ಇಸ್ಲಾಂ ಮತದಾರರ ಮನೆಮನೆಗೆ ತೆರಳಿ ತಮಗಾದ ಅನ್ಯಾಯವನ್ನು ಹೇಳುವುದಾಗಿ ಅನ್ಸಾರಿ ಹಾಕಿರುವ ಆಕ್ರೋಶದ ಬಾಂಬ್‌ಗೆ ಕೈ ನಾಯಕರು ನಡುಗಿದ್ದಾರೆ.
ಕೆಆರ್‌ಪಿಪಿ ವಿಲೀನದ ಪ್ರತಿತಂತ್ರ:
ಅನ್ಸಾರಿ ಆಡಿಯೋ ಬಾಂಬ್‌ನಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್ ಹೈಕಮಾಂಡ್, ಅದಕ್ಕೆ ತಕ್ಕ ಪ್ರತಿತಂತ್ರ ಹೆಣೆದಿದೆ. ಗಂಗಾವತಿ ಶಾಸಕ ಜನಾರ್ದನರೆಡ್ಡಿ ವಿಶ್ವಾಸ ಕುದುರಿಸುವಲ್ಲಿ ಯಶಸ್ವಿಯಾಗಿರುವ ಕೈ ಪಡೆಗೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಭರವಸೆಯನ್ನು ಗಾಲಿ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸಮ್ಮುಖದಲ್ಲಿ ಮೊದಲ ಹಂತದ ಮಾತುಕತೆ ನಡೆದಿದ್ದು, ಬರುವ ದಿನಗಳಲ್ಲಿ ಕೆಆರ್‌ಪಿಪಿ ಕಾಂಗ್ರೆಸ್‌ನೊಂದಿಗೆ ವಿಲೀನವಾಗುವ ಸಾಧ್ಯತೆಗಳಿವೆ ಎಂಬ ಸಂದೇಶ ಅನ್ಸಾರಿ ಪಡೆಗೆ ತಲುಪಿದೆ.
ಕಾಂಗ್ರೆಸ್ ಹಾಗೂ ಅನ್ಸಾರಿ ನಡುವಿನ ಹಗ್ಗಜಗ್ಗಾಟದಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಮತದಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಸಮುದಾಯದ ಪರವಾಗಿರುವ ಪಕ್ಷವನ್ನು, ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕೋ? ಸಮುದಾಯದ ಮುಖಂಡ ಅನ್ಸಾರಿ ನಿಲುವನ್ನು ಬೆಂಬಲಿಸಬೇಕೋ? ಎನ್ನುವ ಗೊಂದಲ ಇದೀಗ ಅಲ್ಪಸಂಖ್ಯಾತ ಮತದಾರರಲ್ಲಿ ಉದ್ಭವಿಸಿದೆ.