ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶನ ವಿಸರ್ಜನೆ ವೇಳೆ ಗಲಾಟೆ ವಿಚಾರದಲ್ಲಿ ಬಿಜೆಪಿಯ ಆರೋಪಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.. ಈಗಾಗಲೇ ಮದ್ದೂರಿನಲ್ಲಿ ಗಲಾಟೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಈ ವಿಚಾರದಲ್ಲಿ ಸುಮ್ನೆ ರಾಜಕೀಯ ಮಾಡ್ಬೇಡಿ ಎಂದು ಪರಮೇಶ್ವರ್ ತಿಳಿಸಿದ್ದಾರೆ. ಕೆಲವೆಡೆ ಸಣ್ಣ ಪುಟ್ಟ ಘಟನೆಗಳು ಆಗಿವೆ. ಎಲ್ಲಾ ಕಡೆ ಪರಿಸ್ಥಿತಿ ನಿಯಂತ್ರಣದಲ್ಲಿದೆ.ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ಪದೇ ಪದೇ ಈ ಥರ ಘಟನೆಗಳಾಗುತ್ತಿವೆ ಅಂದರೆ ಜನರೂ ಸಹ ಸ್ಪಂದಿಸಬೇಕು. ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಎಲ್ಲ ರೀತಿಯ ಕ್ರಮಗಳನ್ನೂ ಈ ಬಾರಿಯ ಗಣೇಶೋತ್ಸವಗಳ ವೇಳೆ ಕೈಗೊಂಡಿದ್ದೇವೆ. ಸೂಕ್ಷ್ಮ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳೂ ಭೇಟಿ ಕೊಟ್ಟಿದ್ದಾರೆ. ಆದರೂ ಒಂದೆರಡು ಮೂರು ಕಡೆ ಸಣ್ಣಪುಟ್ಟ ಘಟನೆಗಳಾಗಿವೆ, ಕ್ರಮ ತಗೊಂಡಿದ್ದೇವೆ. ಬಿಜೆಪಿಯವರು ಆರೋಪ ಮಾಡುತ್ತಾರೆ, ಅವರದ್ದು ಅದೇ ಕೆಲಸ ಎಂದು ಹೇಳಿದರು.
ಇನ್ನು ತುಮಕೂರಿನಲ್ಲೂ ಅದ್ಧೂರಿ ದಸರಾ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ವಿಶೇಷತೆ ಏನೂ ಇಲ್ಲ. ಊರ ಹಬ್ಬ ಮಾಡುತ್ತಿದ್ದೇವೆ. ನಾವು ಮಾರ್ನಮಿ ಅಂತ ಕರೆಯುತ್ತೇವೆ. 11 ದಿನಗಳ ಕಾಲ ತುಮಕೂರಿನಲ್ಲಿ ದಸರಾ ಮಾಡುತ್ತೇವೆ. ಮೈಸೂರಿನಲ್ಲಿ ಹೇಗೆ ಆಚರಣೆ ಮಾಡುತ್ತೇವೋ ಇಲ್ಲೂ ಹಾಗೇ ಮಾಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಮಹತ್ವ ಇಲ್ಲ. ಎಲ್ಲರನ್ನೂ ಸೇರಿಸಿಕೊಂಡು ದಸರಾ ಆಚರಣೆ ಮಾಡುತ್ತೇವೆ ಎಂದರು.
ಧರ್ಮಸ್ಥಳ ಪ್ರಕರಣದ ಕುರಿತು ಮಾತನಾಡಿ, ಎಸ್‌ಐಟಿ ತನಿಖೆ ನಡೀತಿದೆ, ಮುಗಿಯಲಿ. ಈಗ ನಾವು ಉತ್ತರ ಕೊಡಲು ಬರೋದಿಲ್ಲ. ತನಿಖೆ ಮುಗಿದ ಮೇಲೆ ನೋಡೋಣ. ಯರ‍್ಯಾರ ಪಾತ್ರ ಇದೆ ಅದೆಲ್ಲವೂ ತನಿಖೆ ಆಗುತ್ತಿದೆ. ಎಲ್ಲವೂ ತನಿಖೆಯಲ್ಲಿ ಅಂತಿಮವಾಗಿ ಹೊರಗೆ ಬರುತ್ತದೆ. ಸೋನಿಯಾ ಗಾಂಧಿ ಅವರಿಗೆ ಕೆಲವರು ಪತ್ರ ಬರೆದಿರೋದು ಗೊತ್ತಿಲ್ಲ. ಎಸ್‌ಐಟಿ ತನಿಖೆ ನಡೆಯುವಾಗ ನಾನಾಗಲಿ, ಸಿಎಂ ಆಗಲೀ ಯಾರೂ ಹಸ್ತಕ್ಷೇಪ ಮಾಡೋದಿಲ್ಲ ಎಂದು ನುಡಿದರು.