ಬೆಳಗಾವಿ: ಅದು 1924, ಸ್ವಾತಂತ್ರ್ಯ ಸಂಗ್ರಾಮ ಚುರುಕು ಪಡೆದ ದಿನಗಳು. ಆ ದಿನಗಳಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನ ನಡೆದಿತ್ತು. ಆ ಅಧಿವೇಶನ ನಡೆದು ನೂರುವರ್ಷಗಳು ತುಂಬುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದ್ದು, ಬೆಳಗಾವಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಈ ಗಾಂಧಿ ಭಾರತ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ತಾಲೂಕಿನ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ. ಡಿಸೆಂಬರ್ 26 ಮತ್ತು 27 ಎರಡು ದಿನ ರಜೆ ಘೋಷಣೆ ಮಾಡಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಬಿಜೆಪಿ ಟೀಕೆ
ಇನ್ನು ಕಾಂಗ್ರೆಸ್ ಆಯೋಜಿಸಿರುವ ಈ ಗಾಂಧಿ ಕಾರ್ಯಕ್ರಮಕ್ಕೆ ವಿಪಕ್ಷ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಸರ್ಕಾರದ ಹಣದಲ್ಲಿ ಕಾಂಗ್ರೆಸ್ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇನ್ನು ಈ ಬಗ್ಗೆ ಬಿಜೆಪಿ ಸಂಸದ ಮಾತನಾಡಿ, ಮಹಾತ್ಮ ಗಾಂಧಿಯವರು ಜೀವನದಲ್ಲೇ ಒಂದೇ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅದು ಕೂಡ ಬೆಳಗಾವಿಯಲ್ಲಿ ಅಧ್ಯಕ್ಷರಾಗಿದ್ದರು. ಅದರ ನೆನಪಿಗೆ ಕಾಂಗ್ರೆಸ್ ಪಕ್ಷ ಸಮಾವೇಶ ಮಾಡುತ್ತಿದೆ. ಮಹಾತ್ಮ ಗಾಂಧಿ ಹೆಸರಿನಲ್ಲಿ ನಕಲಿ ಗಾಂಧಿಗಳ ವೈಭವಿಕರಣ ನಡೆಯುತ್ತಿದೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷ ವಿಸರ್ಜನೆ ಮಾಡಬೇಕಿತ್ತು. ಆದರೆ ಆ ಕೆಲಸವನ್ನು ಮಾಡಲಿಲ್ಲ. ಸರಕಾರದ ದುಡ್ಡಿನಲ್ಲಿ ಅಧಿವೇಶನ ನಡೆಯುತ್ತಿದ್ದಾರೆ. ವಿದ್ಯುತ್ ಅಲಂಕಾರ, ಕಟೌಟ್ ಗಳನ್ನು ಹಾಕುವ ಮೂಲಕ ಪೂರ್ತಿ ಕಾಂಗ್ರೆಸ್ ಮಯವನ್ನಾಗಿ ಮಾಡುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಕಾರ್ಯಕ್ರಮ ಮಾಡಬೇಕು..? ಗಾಂಧಿ ಕನಸಿನ ಭಾರತ ಹೇಗಿತ್ತು..? ಕಾಂಗ್ರೆಸ್ ನ ಭಾರತ ಹೇಗಿದೆ? ಗ್ರಾಮ ಅಭಿವೃದ್ಧಿಗೆ ಆದ್ಯತೆಯನ್ನ ಕಾಂಗ್ರೆಸ್ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.


