ಗದಗ: ಅಯೋಧ್ಯೆ ರಾಮಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದರೆ, ಇತ್ತ ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಯುವಕನೊಬ್ಬ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾಕಿರುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾನೆ. ಈ ಸಂಬಂಧ ತಾಜುದ್ದೀನ್ ದಫೇದಾರ್ ಎಂಬಾತನನ್ನು ಪಟ್ಟಣದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಘಟನೆಯಿಂದ ಪಟ್ಟಣದಲ್ಲಿ ದ್ವೇಷಮಯ ವಾತಾವರಣ ಸೃಷ್ಟಿಯಾಗಿದೆ. ಸುದ್ದಿ ತಿಳಿದು ಪೊಲೀಸ್ ಠಾಣೆಗೆ ದೌಡಾಯಿಸಿದ ಬಜರಂಗದಳ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಠಾಣೆ ಎದುರು ಪ್ರತಿಭಟನೆ ನಡೆಸಿದರು. ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದರು.
ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸಲು ಕೆಲವು ಕಾಣದ ಶಕ್ತಿಗಳು ಮುಂದಾಗಿವೆ ಎಂದು ವಿಹಿಂಪ, ಬಜರಂಗದಳ ಕಾರ್ಯಕರ್ತರು ಆರೋಪಿಸಿದರು. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಗೂ ಒಂದು ದಿನ ಮುಂಚೆ ಇಂತಹ ಘಟನೆ ನಡೆದಿದ್ದು, ಹಿಂದು ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯುವಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪಿಎಸ್‌ಐ ಸೋಮನಗೌಡ ಗೌಡ್ರ ತಿಳಿಸಿದ್ದಾರೆ.