Wednesday, April 30, 2025
29.2 C
Bengaluru
LIVE
ಮನೆ#Exclusive NewsTop Newsಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಕಾರ್ಯನಿರ್ವಹಣೆ: ಮುಖ್ಯಮಂತ್ರಿ ಸೂಚನೆ

ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಕಾರ್ಯನಿರ್ವಹಣೆ: ಮುಖ್ಯಮಂತ್ರಿ ಸೂಚನೆ

ಬೆಂಗಳೂರು: ಕೆ.ಪಿ.ಎಸ್‌.ಸಿ.ಯಲ್ಲಿ ಯುಪಿಎಸ್‌ಸಿ ಮಾದರಿಯಲ್ಲಿ ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಣೆ ಮಾಡುವ ಕುರಿತು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಸರ್ಕಾರದ ವತಿಯಿಂದ ವಿವಿಧ ನೇಮಕಾತಿಗಳ ಪ್ರಗತಿ ಪರಿಶೀಲನೆ ನಡೆಸಿದರು. ನೇಮಕಾತಿ ಪ್ರಕ್ರಿಯೆಗಳ ವಿಳಂಬದ ಕುರಿತು, ಕಾನೂನು ತೊಡಕುಗಳ ಕುರಿತು ಹಾಗೂ 371 ಜೆ ಅಡಿ ಮೀಸಲಾತಿಗೆ ಸಂಬಂಧಿಸಿದ ಸವಾಲುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ರತಿವರ್ಷ ಎಲ್ಲ ಇಲಾಖೆಗಳ ನೇಮಕಾತಿಗೆ ಏಕಕಾಲಕ್ಕೆ ಅಧಿಸೂಚನೆ ಹೊರಡಿಸಲು ಅನುವಾಗುವಂತೆ ಎಲ್ಲ ಇಲಾಖೆಗಳು ನಿಗದಿತ ಗಡುವಿನೊಳಗೆ ನೇಮಕಾತಿ ಕುರಿತು ಪ್ರಸ್ತಾವನೆಗಳನ್ನು ಸಲ್ಲಿಸಲು ಸೂಚಿಸಿದರು. ಪರೀಕ್ಷಾ ವೇಳಾಪಟ್ಟಿಯಲ್ಲಿ ಫಲಿತಾಂಶ ಪ್ರಕಟಣೆಯ ದಿನಾಂಕ ನಿಗದಿಪಡಿಸಲು ಸೂಚಿಸಲಾಯಿತು.

ಸಿಬ್ಬಂದಿ ಕೊರತೆ, ವಿವಿಧ ನೇಮಕಾತಿ ಪ್ರಾಧಿಕಾರಗಳ ಪರೀಕ್ಷೆಗಳೊಂದಿಗೆ ದಿನಾಂಕ ಕ್ಲಾಷ್‌ ಆಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ವಿವಿಧ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ನ್ಯೂನ್ಯತೆಯೂ ನೇಮಕಾತಿ ವಿಳಂಬಕ್ಕೆ ಒಂದು ಕಾರಣ ಎಂದು ಸಭೆಗೆ ವಿವರಿಸಲಾಯಿತು. ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳ ಕುರಿತು ಸವಿಸ್ತಾರವಾಗಿ ಪರಿಶೀಲಿಸಿ, ಸಚಿವ ಸಂಪುಟ ಉಪಸಮಿತಿಯ ಆದೇಶಗಳ ಪಾಲನೆಯ ಕುರಿತು ಸಹ, ಸಚಿವ ಸಂಪುಟದ ಮುಂದೆ ವಿಷಯ ಮಂಡಿಸಲು ಸೂಚಿಸಿದರು.

ಸಚಿವ ಸಂಪುಟ ಉಪ ಸಮಿತಿಯ ಸೂಚನೆಗಳನ್ನು ಇಲಾಖಾ ಮುಖ್ಯಸ್ಥರು ಪಾಲಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿ ನೇಮಕಾತಿ ಪ್ರಕ್ರಿಯೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಲ್ಯಾಣ ಕರ್ನಾಟಕ ಕೋಶದ ಸಹಮತಿಯೊಂದಿಗೆ ಅಧಿಸೂಚನೆ ಹೊರಡಿಸಬೇಕೆಂದು ಸೂಚನೆ ನೀಡಲಾಯಿತು.

ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದ ನಂತರ ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗುವುದರಿಂದ ನೇಮಕಾತಿ ಆದೇಶ ನೀಡುವಲ್ಲಿಯೂ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಬಗ್ಗೆ ಇಲಾಖಾ ಮುಖ್ಯಸ್ಥರು, ಪ್ರತಿ ವಾರ ಪರಿಶೀಲನೆ ಮಾಡಬೇಕು. ಸುತ್ತೋಲೆಗಳ ಕೈಪಿಡಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಲು ಸೂಚಿಸಿದರು. ಮುಂದಿನ ವಾರ ಮತ್ತೊಮ್ಮೆ ಸಭೆ ಕರೆದು ಸಂಪೂರ್ಣ ಮಾಹಿತಿ ಪಡೆದು ಚರ್ಚಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ, ಹೆಚ್.ಕೆ. ಪಾಟೀಲ, ಈಶ್ವರ್‌ ಖಂಡ್ರೆ, ಕೆ. ಸುಧಾಕರ್‌, ಡಾ. ಎಂ.ಸಿ. ಸುಧಾಕರ್‌, ಎನ್.ಎಸ್. ಬೋಸರಾಜು,, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments