Thursday, November 20, 2025
19.1 C
Bengaluru
Google search engine
LIVE
ಮನೆ#Exclusive News2900 ರೂಪಾಯಿಂದ 29 ಕೋಟಿ ವರೆಗೆ, ದರ್ಶನ್ ಸಿನಿ ಪಯಣ ನೆನೆದ ನಟ ಕೋಮಲ್

2900 ರೂಪಾಯಿಂದ 29 ಕೋಟಿ ವರೆಗೆ, ದರ್ಶನ್ ಸಿನಿ ಪಯಣ ನೆನೆದ ನಟ ಕೋಮಲ್

ದರ್ಶನ್ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರು, ಅವರ ವ್ಯಕ್ತಿತ್ವ ಕೆಲವರಿಗೆ ಇಷ್ಟವಾಗಬಹುದು, ಇಷ್ಟ ಆಗದೇ ಇರುವವರೂ ಸಹ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಏನೇ ಆದರು ಅವರು ಚಿತ್ರರಂಗದಲ್ಲಿ ನೆಲೆ ನಿಲ್ಲಲು ಪಟ್ಟ ಕಷ್ಟವನ್ನು ಮಾತ್ರ ಒಪ್ಪದೇ ಇರಲು ಸಾಧ್ಯವಿಲ್ಲ. ಲೈಟ್ ಬಾಯ್​ಯಿಂದ ಹಿಡಿದು ಸ್ಟಾರ್ ನಟ ಆಗುವವರೆಗೂ ದರ್ಶನ್​ರ ಶ್ರಮ, ಪ್ರಯತ್ನ ಕಡಿಮೆಯಾದುದಲ್ಲ. ಮೊದಲಿಗೆ ಲೈಟ್ ಬಾಯ್ ಆಗಿ ಆ ನಂತರ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಕೊನೆಗೆ ನಾಯಕ ನಟ ಆದರು ದರ್ಶನ್. ಅಂದಹಾಗೆ ದರ್ಶನ್​ಗೆ ಆಗ ಸಿಗುತ್ತಿದ್ದ ಸಂಭಾವನೆ, ಅದರ ಬಗ್ಗೆ ದರ್ಶನ್​ಗೆ ಇದ್ದ ಅಸಮಾಧಾನ ಆ ನಂತರ ಅವರ ಸಂಭಾವನೆ ಏರಿಕೆಯಾದ ರೀತಿಯ ಬಗ್ಗೆ ನಟ ಕೋಮಲ್ ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ನಟ ಕೋಮಲ್, ‘ನಾನು ಹಾಗೂ ದರ್ಶನ್ ಮೊದಲು ಭೇಟಿ ಮಾಡಿದ್ದು ‘ಹರೀಶ್ಚಂದ್ರ’ ಸಿನಿಮಾದಲ್ಲಿ. ಆ ಸಿನಿಮಾಕ್ಕೆ ಎಸ್ ನಾರಾಯಣ್ ಮತ್ತು ಮೋಹನ್ ಅವರುಗಳು ಹೀರೋ, ನಾನು ಸಣ್ಣ ಕಾಮಿಡಿ ಪಾತ್ರ ಮಾಡಿದ್ದೆ, ದರ್ಶನ್ ಆ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಆ ಸಿನಿಮಾಕ್ಕೆ ಗಂಗಾಧರ್ ನಿರ್ಮಾಪಕರು. ನಾನು ಹಾಗೂ ದರ್ಶನ್ ಒಟ್ಟಿಗೆ ಸಂಭಾವನೆ ಪಡೆದುಕೊಳ್ಳಲು ಹೋದೆವು. ನಾನು ಮೊದಲು ಹೋದೆ, ನನಗೆ 4900 ರೂಪಾಯಿ ಸಂಭಾವನೆ ಕೊಟ್ಟರು, ಬಳಿಕ ದರ್ಶನ್ ಹೋದರು ಅವರಿಗೆ 2900 ರೂಪಾಯಿ ಸಂಭಾವನೆ ಕೊಟ್ಟರು’ ಎಂದು ನೆನಪು ಮಾಡಿಕೊಂಡಿದ್ದಾರೆ ಕೋಮಲ್.

‘2900 ರೂಪಾಯಿ ತೆಗೆದುಕೊಂಡು ಕೆಳಗೆ ಬಂದ ದರ್ಶನ್, ನೋಡು ನೀನು ಬೆಂಗಳೂರಿನಲ್ಲೇ ಇರುತ್ತೀಯ ನಿನಗೆ 4900 ಕೊಟ್ಟಿದ್ದಾರೆ, ನಾನು ಮೈಸೂರಿನಿಂದ ಬರುತ್ತೇನೆ ನನಗೆ 2900 ಕೊಟ್ಟಿದ್ದಾರೆ’ ಎಂದಿದ್ದರು. ಆಗ ನಾನು ಇರಲಿ ಬಿಡು ಮುಂದಕ್ಕೆ ನಿನಗೆ ಜಾಸ್ತಿ ಸಿಗುತ್ತೆ ಚಿಂತೆ ಮಾಡಬೇಡ ಎಂದು ಹೇಳಿದ್ದೆ.

ಅದಾದ ಬಳಿಕ ನಾನು ಹಾಗೂ ದರ್ಶನ್ ಒಟ್ಟಿಗೆ ನಟಿಸಿದ್ದು ‘ನಿನಗೋಸ್ಕರ’ ಸಿನಿಮಾದಲ್ಲಿ. ಆ ಸಿನಿಮಾದಲ್ಲಿ ನಟಿಸಲು ದರ್ಶನ್​ಗೆ ಮೂರು ಲಕ್ಷ ಸಂಭಾವನೆ ಕೊಟ್ಟಿದ್ದರು. ಆ ಸಿನಿಮಾಕ್ಕೆ ನನಗೆ 21 ಸಾವಿರ ರೂಪಾಯಿ ಕೊಟ್ಟಿದ್ದರು’ ಎಂದು ಹೇಳಿದ್ದಾರೆ ಕೋಮಲ್.

‘ಆ ನಂತರ ಮತ್ತೆ ನಾವು ಒಟ್ಟಿಗೆ ನಟಿಸಿದ್ದು ‘ದತ್ತ’ ಸಿನಿಮಾದಲ್ಲಿ. ಆ ಸಿನಿಮಾದಲ್ಲಿ ನಟಿಸುವ ವೇಳೆಗೆ ದರ್ಶನ್​ಗೆ 36 ಲಕ್ಷ ರೂಪಾಯಿ ಸಂಭಾವನೆ ಕೊಡುತ್ತಿದ್ದರು, ನನಗೆ ಆಗ 3 ಲಕ್ಷ ರೂಪಾಯಿ ಕೊಡುತ್ತಿದ್ದರು.

ಬಳಿಕ ನಾವು ‘ಗಜ’ ಸಿನಿಮಾದಲ್ಲಿ ನಟಿಸಿದೆವು, ಅಷ್ಟರಲ್ಲಿ ಅವರು ಎಲ್ಲರನ್ನೂ ದಾಟಿ ಮುಂದೆ ಹೋಗಿಬಿಟ್ಟಿದ್ದರು’ ಎಂದಿದ್ದಾರೆ ನಟ ಕೋಮಲ್. ಕೆಲವು ಸುದ್ದಿಗಳ ಪ್ರಕಾರ ದರ್ಶನ್ ಈಗ ಪ್ರತಿ ಸಿನಿಮಾಕ್ಕೆ ಸುಮಾರು 29 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ ಎನ್ನಲಾಗುತ್ತದೆ.

ಅದ್ಭುತವಾದ ವೃತ್ತಿ ಜೀವನ ನಡೆಯುವಾಗಲೇ ದರ್ಶನ್ ಸ್ವಯಂಕೃತ ಅಪರಾಧದಿಂದಾಗಿ ಜೈಲು ಸೇರಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ಆಗಿದ್ದಾರೆ. ಕಳೆದ ನಾಲ್ಕು ತಿಂಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿದ್ದಾರೆ. ಅವರು ನಟಿಸಬೇಕಾದ ಸಿನಿಮಾಗಳು ನಿಂತು ಹೋಗಿವೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments