mumbaiದೇಶ/ವಿದೇಶ

ಇಲಿ ತಿಂದ ಮೀನಿಗೆ ಗೆಳೆಯನ ಬಲಿ; ಕಲ್ಲಿನಿಂದ ಜಜ್ಜಿ ಸ್ನೇಹಿತನ ಹತ್ಯೆ!

ಮುಂಬೈ : ಬೇಯಿಸಿದ ಮೀನಿನ ವಿಚಾರವಾಗಿ ಉಂಟಾದ ಸಣ್ಣ ಅನುಮಾನವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೋರೆಗಾಂವ್ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, ಅಫ್ಸರ್ ಎಂಬುವವರನ್ನು ಅವರ ಸ್ನೇಹಿತರಾದ ಸುರೇಶ್ ಮತ್ತು ರಾಜೇಶ್ ಎಂಬುವವರು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ. ಮೃತ ಅಫ್ಸರ್ ಮತ್ತು ಆರೋಪಿಗಳಿಬ್ಬರೂ ಗುಜರಿ ವ್ಯಾಪಾರಿಗಳಾಗಿದ್ದು, ಅಂದು ರಾತ್ರಿ ಮನೆಯಲ್ಲಿ ಮೀನು ಅಡುಗೆ ಮಾಡಿ ಮದ್ಯಪಾನ ಮಾಡಿ ನಿದ್ರೆಗೆ ಜಾರಿದ್ದರು.

ಮೂವರೂ ನಿದ್ರೆಯಲ್ಲಿದ್ದಾಗ ಪಾತ್ರೆಯಲ್ಲಿದ್ದ ಮೀನನ್ನು ಇಲಿಗಳು ತಿಂದು ಖಾಲಿ ಮಾಡಿದ್ದವು. ನಿದ್ರೆಯಿಂದ ಎದ್ದ ಸುರೇಶ್ ಮತ್ತು ರಾಜೇಶ್, ಪಾತ್ರೆಯಲ್ಲಿ ಮೀನು ಇಲ್ಲದಿರುವುದನ್ನು ಕಂಡು ಅಫ್ಸರ್ ಒಬ್ಬನೇ ಎಲ್ಲವನ್ನೂ ತಿಂದಿದ್ದಾನೆಂದು ತಪ್ಪಾಗಿ ಭಾವಿಸಿದ್ದರು. ಇದೇ ವಿಚಾರವಾಗಿ ಮೂವರ ನಡುವೆ ತೀವ್ರ ಜಗಳ ನಡೆದಿದ್ದು, ಆಕ್ರೋಶಗೊಂಡ ಇಬ್ಬರು ಆರೋಪಿಗಳು ಅಫ್ಸರ್ ತಲೆಯ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳ ಬಳಿ ಮೊಬೈಲ್ ಅಥವಾ ಯಾವುದೇ ಗುರುತಿನ ಚೀಟಿ ಇಲ್ಲದ ಕಾರಣ ಪೊಲೀಸರಿಗೆ ತನಿಖೆ ಆರಂಭದಲ್ಲಿ ಸವಾಲಾಗಿ ಪರಿಣಮಿಸಿತ್ತು.

ಸ್ಥಳೀಯವಾಗಿ ಸುಮಾರು 50ಕ್ಕೂ ಹೆಚ್ಚು ಗುಜರಿ ಆಯುವವರನ್ನು ವಿಚಾರಣೆ ನಡೆಸಿದ ವನ್ರೈ ಪೊಲೀಸರು, ಅಂತಿಮವಾಗಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಸುರೇಶ್‌ನನ್ನು ಹರಿಯಾಣದಲ್ಲಿ ಮತ್ತು ಮತ್ತೊಬ್ಬ ಆರೋಪಿ ರಾಜೇಶ್‌ನನ್ನು ರೈಲ್ವೇ ನಿಲ್ದಾಣದಲ್ಲಿ ಬಂಧಿಸಲಾಗಿದೆ. ತನಿಖೆಯ ವೇಳೆ ರಾಜೇಶ್ ಈ ಹಿಂದೆ ಕೂಡ ಕೊಲೆ ಮತ್ತು ಸುಲಿಗೆಯಂತಹ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದ ಎನ್ನುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಸದ್ಯ ಪೊಲೀಸರು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Comments (0)

Your email address will not be published. Required fields are marked *

Back to top button