ಬೆಂಗಳೂರು: ಮಹಿಳೆಯರಿಗೆ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಗ್ಯಾರಂಟಿಗಳ ಬಗ್ಗೆ ಎಚ್ಚರದಿಂದಿರಿ ಅಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಹಿಳೆಯರ ಬಗ್ಗೆ ಹೇಳಿಕೆಗೆ ಸ್ಪಷ್ಟನೆ ಕೊಟ್ಟ ಅವರು ಕಾಂಗ್ರೆಸ್‍ನವರಿಗೆ ಇದು ಬಿಟ್ಟು ಚರ್ಚೆ ಮಾಡಲು ಅವರಲ್ಲಿ ಬೇರೆ ವಿಚಾರ ಇಲ್ಲ. ಗ್ಯಾರಂಟಿಗಳ ಹೆಸರಲ್ಲಿ ಹಳ್ಳಿಯ ಮುಗ್ಧ ಹೆಣ್ಣುಮಕ್ಕಳನ್ನ ದಾರಿ ತಪ್ಪಿಸುತ್ತಿದ್ದಾರೆ. ಎಂದು ಹೇಳಿದ್ದೇನೆ.
ನಿಮಗೆ ಕೈ ಎತ್ತಿ ಕೊಡುವ ಶಕ್ತಿ ಕೊಡದೆ ಭಿಕ್ಷೆ ಬೇಡುವ ಪರಿಸ್ಥಿತಿಯಲ್ಲಿ ಇಟ್ಟಿದ್ದಾರೆ. ಇದರ ಬಗ್ಗೆ ಎಚ್ಚರದಿಂದ ದಾರಿತಪ್ಪದೆ ಗಮನಿಸಬೇಕೆಂದು ಹೇಳಿದ್ದೇನೆ ಎಂದು ಸ್ಪಷ್ಟನೆ ಕೊಟ್ಟರು.
ದಾರಿ ತಪ್ಪಿದ್ದಾರೆ ಎಂದು ಮಹಿಳೆಯರನ್ನ ಅವಮಾನ ಮಾಡಿದ್ದೇನಾ ನಾನು?. ಮಹಿಳೆಯರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಗ್ಯಾರಂಟಿಗಳ ಬಗ್ಗೆ ಎಚ್ಚರದಿಂದಿರಿ ಎಂದು ಹೇಳಿದ್ದೇನೆ. ನಾನು ಸಾರ್ವಜನಿಕ ಜೀವನಕ್ಕೆ ಬರುವುದಕ್ಕಿಂತ ಮುಂಚೆಯಿಂದಲೂ ಕಷ್ಟ ಎಂದು ಬರುವ ಜನರಿಗೆ ಆಸರೆಯಾಗಿದ್ದೇನೆ. ಕೋಟ್ಯಂತರ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ. ತಾಯಂದಿರು ಸಾರಾಯಿ ನಿಷೇಧ ಮಾಡುವಂತೆ ಮನವಿ ಮಾಡಿದಾಗ ಅವರಿಗೆ ಗೌರವ ಕೊಟ್ಟು ಸಾರಾಯಿ ನಿಷೇಧ ಮಾಡಿದ್ದೇನೆ. ಇದು ನಾನು ಮಹಿಳೆಯರಿಗೆ ಕೊಟ್ಟ ಗೌರವ ಎಂದರು.
ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಹೆಚ್.ಡಿ ಕುಮಾರ ಸ್ವಾಮಿ ಅವರ ವಿರುದ್ಧ ಮಂಡ್ಯದಲ್ಲಿ ಮಹಿಳೆಯರ ಪ್ರತಿಭಟನೆ, ರಸ್ತೆ ತಡೆ, ಗೋ ಬ್ಯಾಕ್ ಚಳುವಳಿ. pic.twitter.com/PRDXP1UDA1
— Karnataka Congress (@INCKarnataka) April 14, 2024
ಕಾಂಗ್ರೆಸ್‍ನವರಿಂದ ನಾನು ಮಹಿಳೆಯರಿಗೆ ಗೌರವ ಕೊಡುವುದನ್ನ ಕಲಿಯಬೇಕಿಲ್ಲ. ಇವರಾರಿಗೂ ನಾನು ಉತ್ತರ ಕೊಡಬೇಕಿಲ್ಲ. ನಿನ್ನೆ ನಾನು ಮಹಿಳೆಯರಿಗೆ ಅಗೌರವವಾಗಿ ಮಾತನಾಡಿಲ್ಲ ಎಂದರು.


