ಬೆಂಗಳೂರು : ಸಾರ್ವತ್ರಿಕ ಚುನಾವಣೆಯಲ್ಲಿ ಇನ್ನು ಎರಡು ಹಂತದ ಮತದಾನ ಬಾಕಿ ಉಳಿದಿದೆ. ಮೇ 25 ಮತ್ತು ಜೂನ್ 1ನೇ ತಾರೀಕಿಗೆ ಆರನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಬಿಹಾರ, ಹರ್ಯಾಣ, ದೆಹಲಿ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಚಂಡೀಗಢದಲ್ಲಿ ಚುನಾವಣೆ ನಡೆಯಲಿದೆ.

ಕೆಲವು ದಿನಗಳ ಹಿಂದೆ, ಗುಪ್ತಚರ ವರದಿ ಮುಖ್ಯಮಂತ್ರಿಗಳ ಕೈಸೇರಿದೆ, ಆ ವರದಿಯಿಂದ ಸಿಎಂ ಸಂತುಷ್ಟರಾಗಿದ್ದಾರೆ ಎನ್ನುವ ಅನಧಿಕೃತ ಮೂಲಗಳ ಸುದ್ದಿಗಳು ಸಾಕಷ್ಟು ವೈರಲ್ ಆಗಿದ್ದವು. ಬಿಜೆಪಿ ಎರಡಂಕಿ ದಾಟುವುದಿಲ್ಲ, ಕಾಂಗ್ರೆಸ್ಸಿಗೆ ಅರ್ಥ, ಬಿಜೆಪಿಗೆ ಅರ್ಥ ಎಂದೆಲ್ಲಾ ವರದಿಯಾಗಿದ್ದವು.

ಸಾಮಾನ್ಯವಾಗಿ ಯಾವುದೇ ಚುನಾವಣೆ ನಡೆದ ನಂತರ, ಬಹುತೇಕ ಮುಖ್ಯಮಂತ್ರಿಗಳ ಸುಪರ್ದಿಯಲ್ಲಿರುವ ಗುಪ್ತಚರ ಇಲಾಖೆ, ವರದಿಯನ್ನು ಸಿಎಂಗೆ ನೀಡುತ್ತದೆ. ಅತ್ಯಂತ ಗೌಪ್ಯವಾಗಿರುವ ಈ ವರದಿಗಳು ಲೀಕ್ ಆದರೆ ಮಾತ್ರ ಸಾರ್ವಜನಿಕವಾಗುತ್ತದೆ. ಹಾಗಾಗಿ, ಇಂಟೆಲಿಜೆನ್ಸ್ ರಿಪೋರ್ಟ್ ನಲ್ಲಿ ಏನಿದೆ ಎನ್ನುವುದು ಅಂತೆಕಂತೆ ಸುದ್ದಿಗಳಾಗಿರುತ್ತವೇ ಹೊರತು, ಖಚಿತ ಸುದ್ದಿಗಳಾಗಿರುವುದಿಲ್ಲ. ಆದರೆ, ನೈಜ ಫಲಿತಾಂಶಕ್ಕೆ ಹತ್ತಿರವಾದ ಉದಾಹರಣೆಗಳೂ ಇವೆ..

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಾರ್ಟಿ ಇಷ್ಟೇ ಸ್ಥಾನ ಗೆಲ್ಲುತ್ತದೆ ಎಂದು ಎಕ್ಸಿಟ್ ಪೋಲ್ ನಾಚಿಸುವಂತೆ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದರು. 136 ಸ್ಥಾನವನ್ನು (ದರ್ಶನ್ ಪುಟ್ಟಣ್ಣಯ್ಯ ಸೇರಿ ) ಗೆಲ್ಲುತ್ತೇವೆ ಎಂದು ಡಿಕೆಶಿ ಹೇಳಿದ್ದರು. ಅದರಂತೇ, ಕಾಂಗ್ರೆಸ್ 135 ಸ್ಥಾನವನ್ನು ಗೆದ್ದಿತ್ತು, ಬೆಂಗಳೂರು ದಕ್ಷಿಣ ವ್ಯಾಪ್ತಿಯ ಜಯನಗರದಲ್ಲಿ ಕಾಂಗ್ರೆಸ್ ಕೂದಲೆಳೆಯಿಂದ ( 16 ಮತಗಳಿಂದ) ಸೋತಿತ್ತು.

224 ಅಸೆಂಬ್ಲಿ ಸ್ಥಾನವನ್ನು ಹೊಂದಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಅಷ್ಟು ಕರಾರುವಕ್ಕಾಗಿ ಹೇಳಿದ್ದ ಡಿ ಕೆ ಶಿವಕುಮಾರ್, 28 ಲೋಕಸಭಾ ಕ್ಷೇತ್ರದ ಫಲಿತಾಂಶವನ್ನು ಅದೇ ವಿಶ್ವಾಸದಿಂದ ಹೇಳುತ್ತಿಲ್ಲ. ಮುಖ್ಯಮಂತ್ರಿಗಳಿಗಾಗಲಿ, ಉಪ ಮುಖ್ಯಮಂತ್ರಿಗಳಿಗಾಗಲಿ ಎಷ್ಟು ಸ್ಥಾನ ಗೆಲ್ಲಬಹುದು ಎನ್ನುವ ವಿಚಾರದಲ್ಲಿ ಇಬ್ಬರಿಂದಲೂ ಖಚಿತತೆಯ ಮಾತು ಹೊರಬರುತ್ತಿಲ್ಲ.

ಇಪ್ಪತ್ತು ಸ್ಥಾನ ಗೆಲ್ಲುತ್ತೇವೆ ಎಂದು ಮತದಾನಕ್ಕೂ ಮುನ್ನ ಹೇಳುತ್ತಿದ್ದ ಡಿಸಿಎಂ ಡಿ ಕೆ ಶಿವಕುಮಾರ್, “ಉತ್ತರ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಇಂಡಿಯಾ ಮೈತ್ರಿಕೂಟ 300ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ. ಎನ್ ಡಿಎ ಮೈತ್ರಿಕೂಟ ಸುಮಾರು 200 ಆಸುಪಾಸಿನಲ್ಲಿ ಗೆಲ್ಲಲಿದೆ. ರಾಜ್ಯದಲ್ಲಿ 20 ಸ್ಥಾನ ಗೆಲ್ಲಲಿದ್ದೇವೆ, ಸ್ವಲ್ಪ ಆಕಡೆ ಈಕಡೆ ಆಗಬಹುದು” ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು ಇದೇ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ” ಬಿಜೆಪಿಯವರಂತೆ 28 ಗೆಲ್ತೀವಿ ಅಂತ ನಾನು ಹೇಳುವುದಿಲ್ಲ. ರಾಜ್ಯದಲ್ಲಿ ಕನಿಷ್ಠ 15 ಸ್ಥಾನ ಗರಿಷ್ಠ 20 ಸ್ಥಾನ ಗೆಲ್ತೀವಿ” ಎಂದು ಮುಖ್ಯಮಂತ್ರಿಗಳು ಹೇಳಿದ್ದರು.
ಅದೇ ರೀತಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ 28ಕ್ಕೆ 28 ಗೆಲ್ಲುತ್ತೇವೆ ಎನ್ನುತ್ತಿದ್ದರು. ಮತದಾನದ ನಂತರ 24 -25 ಸ್ಥಾನ ಗೆಲ್ಲುತ್ತೇವೆ ಎಂದು ತಮ್ಮ ಹಿಂದಿನ ಹೇಳಿಕೆಯನ್ನು ಬದಲಾಯಿಸಿದ್ದರು. ಇನ್ನು, ಗುಪ್ತಚರ ವರದಿ ಎಂದು ಮಾಧ್ಯಮಗಳು ತಮ್ಮದೇ ಆದ ರೀತಿಯಲ್ಲಿ ಸಂಖ್ಯೆಗಳನ್ನು ವ್ಯಾಖ್ಯಾನಿಸುತ್ತಿವೆ.
ಮತದಾನಕ್ಕೆ ಮುನ್ನ ಮತ್ತು ಗುಪ್ತಚರ ವರದಿ ಬಂದ ನಂತರ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಧ್ವನಿಯಲ್ಲಿ ಅದೇ ಹಿಂದಿನ (ಅಸೆಂಬ್ಲಿ ಚುನಾವಣೆ) ವಿಶ್ವಾಸ ಕಾಣುತ್ತಿಲ್ಲ. ಸಾರ್ವತ್ರಿಕ ಚುನಾವಣೆಯು ರಾಷ್ಟ್ರ ಮಟ್ಟದ ವಿಷಯದ ಮೇಲೆ ಸಾಮಾನ್ಯವಾಗಿ ನಡೆಯುವುದರಿಂದ, ಮತಾದಾರರ ನಾಡಿಮಿಡಿತ ಸರಿಯಾಗಿ ಅರಿಯುವಲ್ಲಿ ಹಿಂದೆ ಮುಂದೆ ಆಗಿರಬಹುದು. ಹಾಗಾದರೆ, ಇಂಟೆಲೆಜೆನ್ಸ್ ರಿಪೋರ್ಟ್ ನಲ್ಲಿ ಇರುವುದಾದರೂ ಏನು?

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

By admin

Leave a Reply

Your email address will not be published. Required fields are marked *

Verified by MonsterInsights