ಕೊಪ್ಪಳ: ಕಾಂಗ್ರೆಸ್ ಗೆ ಕರ್ಮ ರಿಟರ್ನ್ಸ್ ಆಗಿದೆ ಎಂದು ಹೇಳುವ ಮೂಲಕ ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ಮಾತನಾಡಿದ ಅವರು, ಇದೀಗ ಅರವಿಂದ ಕೇಜ್ರಿವಾಲ್ ರನ್ನು ಬಂಧಿಸಿದ್ದಕ್ಕೆ ಸೇಡಿನ ರಾಜಕಾರಣ ಅಂತ ಕಾಂಗ್ರೆಸ್ ಹೇಳುತ್ತಿದೆ. ಅಂದು ನನ್ನನ್ನು ಸೇರಿದಂತೆ ಯಡಿಯೂರಪ್ಪ, ಜಗಮೋಹನ್ ರೆಡ್ಡಿ, ಕನಿಮೋಳಿ, ಅಮಿತ್ ಶಾ ಅವರನ್ನು ಜೈಲಿಗೆ ಹಾಕಲಾಯಿತು. ಆಗ ದ್ವೇಷದ ರಾಜಕಾರಣ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಕಿಡಿಕಾರಿದರು.
ಒಳ್ಳೆಯದನ್ನು ಮಾಡಿದ್ರೆ ಒಳ್ಳೆಯದಾಗುತ್ತೆ. ಕೆಟ್ಟದ್ದನ್ನು ಮಾಡಿದ್ರೆ ಕೆಟ್ಟದಾಗುತ್ತೆ. ಇದೀಗ ಕಾಂಗ್ರೆಸ್ ನ ಪಾಪದ ಕೊಂಡ ತುಂಬಿದೆ. ಅದನ್ನು ಅವರು ಅನುಭವಿಸಲೇಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.
ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಾಂಗ್ರೆಸ್ ನವರೇ ಸೋಲಿಸುತ್ತಾರೆ. ಸೋಲಿಗೆ ಹೊಣೆ ಮಾಡಿ ಶಿವರಾಜ್ ತಂಗಡಗಿ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು. ತಾನು ಮಂತ್ರಿಯಾಗಬೇಕು ಅಂತ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಯತ್ನ ನಡೆಸಿದ್ದಾರೆ ಎಂದು ಹೇಳಿದರು
2008 ರಲ್ಲಿ ಸೇಡಿನ ರಾಜಕಾರಣ ದಿಂದ ನನ್ನನ್ನು ಜೈಲಿಗೆ ಅಟ್ಟಲಾಗಿತ್ತು ಕಾಂಗ್ರೆಸ್ ಗೆ ತಾನು ಮಾಡಿದ ಕರ್ಮ ಸುಮ್ಮನೆ ಬಿಡುವುದಿಲ್ಲ.ಕಾಂಗ್ರೆಸ್ ಪಕ್ಷ ವಿನಾಶದ ಅಂಚಿಗೆ ತಲುಪಿದೆ.ಕೇಂದ್ರ ಮತ್ತು ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಮದು ಕಾಂಗ್ರೆಸ್ ವಿರುದ್ದ ಜನಾರ್ಧನ್ ರೆಡ್ಡಿ ವಾಗ್ದಾಳಿ ನಡೆಸಿದರು.