Saturday, September 13, 2025
27.2 C
Bengaluru
Google search engine
LIVE
ಮನೆಕ್ರಿಕೆಟ್ಪಂತ್‌-ಹಾರ್ದಿಕ್‌ ಅಬ್ಬರ, ಬಾಂಗ್ಲಾ ಎದುರು ಭಾರತಕ್ಕೆ ಭರ್ಜರಿ ಜಯ!

ಪಂತ್‌-ಹಾರ್ದಿಕ್‌ ಅಬ್ಬರ, ಬಾಂಗ್ಲಾ ಎದುರು ಭಾರತಕ್ಕೆ ಭರ್ಜರಿ ಜಯ!

ನ್ಯೂಯಾರ್ಕ್‌: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ 60 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ತನ್ನ ಮೊದಲನೇ ಪಂದ್ಯಕ್ಕೂ ಮುನ್ನ ಟೀಮ್‌ ಇಂಡಿಯಾ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಇಲ್ಲಿನ ಕೌಂಟಿ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 183 ರನ್‌ಗಳ ಗುರಿ ಹಿಂಬಾಲಿಸಿದ ಬಾಂಗ್ಲಾದೇಶ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಅರ್ಷದೀಪ್‌ ಸಿಂಗ್ ಆರಂಭದಲ್ಲಿಯೇ ಮಾರಕ ದಾಳಿ ನಡೆಸಿ ಸೌಮ್ಯ ಸರ್ಕಾರ್‌ ಹಾಗೂ ಲಿಟಾನ್‌ ದಾಸ್‌ ಅವರನ್ನು ಔಟ್‌ ಮಾಡಿದರು. ಆ ಮೂಲಕ ಬಾಂಗ್ಲಾದೇಶಕ್ಕೆ ಆರಂಭಿಕ ಆಘಾತ ನೀಡಿದರು. ನಂತರ ಮೊಹಮ್ಮದ್‌ ಸಿರಾಜ್‌, ನಜ್ಮುಲ್‌ ಹುಸೇನ್ ಶಾಂಟೋ ಅವರ ವಿಕೆಟ್‌ ಪಡೆದರು.

ಆದರೆ, ಮಧ್ಯಮ ಕ್ರಮಾಂಕದಲ್ಲಿ ಶಕಿಬ್‌ ಅಲ್‌ ಹಸನ್‌ 28 ರನ್‌ ಗಳಿಸಿದರು. ಆದರೆ, ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಮಹ್ಮುದುಲ್ಲಾ 28 ಎಸೆತಗಳಲ್ಲಿ40 ರನ್‌ ಗಳಿಸಿ ರಿಟೈರ್‌ ಹರ್ಟ್ ಆದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ತಂಡ ಸೋಲು ಅನುಭವಿಸಿತು.

182 ರನ್‌ ಕಲೆ ಹಾಕಿದ ಭಾರತ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 182 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಬಾಂಗ್ಲಾದೇಶ ತಂಡಕ್ಕೆ 183 ರನ್‌ಗಳ ಸವಾಲುದಾಯಕ ಗುರಿಯನ್ನು ನೀಡಿತ್ತು. ಭಾರತ ತಂಡದ ಪರ 53 ರನ್ ಕಲೆ ಹಾಕಿದ ರಿಷಭ್‌ ಪಂತ್‌ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಡರು.

ರಿಷಭ್‌ ಪಂತ್‌ ಸ್ಪೋಟಕ ಅರ್ಧಶತಕ

ಬರೋಬ್ಬರಿ 15 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿರುವ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌, ಅಭ್ಯಾಸ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಎದುರಿಸಿದ ಕೇವಲ 32 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 53 ರನ್ ಗಳಿಸಿ ರಿಟೈರ್‌ ಔಟ್‌ ಆದರು. ಇದಕ್ಕೂ ಮುನ್ನ ಸಂಜು ಸ್ಯಾಮ್ಸನ್‌ (1) ಹಾಗೂ ರೋಹಿತ್‌ ಶರ್ಮಾ (23) ವಿಕೆಟ್‌ ಒಪ್ಪಿಸಿದರು.

ಸೂರ್ಯ-ಹಾರ್ದಿಕ್‌ ಅಬ್ಬರ

ರಿಷಭ್‌ ಪಂತ್‌ ಜೊತೆಗೆ ಈ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಕೂಡ ಅಬ್ಬರಿಸಿದರು. ಇವರು ಎದುರಿಸಿದ ಕೇವಲ 18 ಎಸೆತಗಳಲ್ಲಿ 31 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದರು. ಅಂದ ಹಾಗೆ 2024ರ ಐಪಿಎಲ್‌ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ್ದ ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ 40 ರನ್ ಗಳಿಸಿದರು. ಅದರಲ್ಲಿಯೂ ವಿಶೇಷವಾಗಿ ಇವರು ಹ್ಯಾಟ್ರಿಕ್‌ ಸಿಕ್ಸರ್‌ ಬಾರಿಸಿ ಗಮನ ಸೆಳೆದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments