ಬೆಂಗಳೂರು: ರಾಜಧಾನಿಯಲ್ಲಿ ಗನ್ ತೋರಿಸಿ 40 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಲಾಗಿದೆ. ಸಹಕಾರನಗರ ಕಾವೇರಿ ಸ್ಕೂಲ್ ಹಿಂಭಾಗದ ಮನೆಯಲ್ಲಿ ರಾತ್ರಿ 8:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಡಕಾಯಿತರ ಗ್ಯಾಂಗ್ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ದರೋಡೆ ಮಾಡಿದೆ.
ವರ್ನಾ ಕಾರಿನಲ್ಲಿ ಬಂದಿದ್ದ ದರೋಡೆ ಗ್ಯಾಂಗ್ ಕಾರ್ಯವೈಖರಿ ಎರಡು ತಿಂಗಳ ಹಿಂದೆ ನಡೆದ ದರೋಡೆಯನ್ನು ನೆನಪಿಸಿದೆ. ಅಲ್ಲಿಯೂ ಇದೇ ರೀತಿ ಮನೆಯೊಂದಕ್ಕೆ ನುಗ್ಗಿ 2 ಕೋಟಿ ರೂ.ಗಳಷ್ಟು ಮೌಲ್ಯದ ಸೊತ್ತನ್ನು ಗ್ಯಾಂಗ್ ದೋಚಿತ್ತು. ಅದೇ ಗುಂಪು ಈ ಕೃತ್ಯ ನಡೆಸಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕೊಡಿಗೆಹಳ್ಳಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲಿಸಿದ್ದಾರೆ. ಈ ಹಿಂದಿನ ಪ್ರಕರಣವೂ ಕೊಡಿಗೇಹಳ್ಳಿ ಠಾಣೆಯಲ್ಲಿ ದಾಖಲಾಗಿತ್ತು.
ಸಹಕಾರ ನಗರದಲ್ಲಿರುವ ಡಾ. ಉಮಾಶಂಕರ್ ಎಂಬವರ ಮನೆಯಲ್ಲಿ ದರೋಡೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲ ಎಂದುಕೊಂಡು ಮೂರು ಜನ ಮುಸುಕುಧಾರಿಗಳ ಗುಂಪು ಎಂಟ್ರಿಯಾಗಿತ್ತು. ಅದಾಗಲೇ ಮನೆಯೊಳಗೆ ಹುಡುಕಾಡಿ ಗಂಟುಮೂಟೆ ಕಟ್ಟಿಕೊಂಡು ದರೋಡೆಕೋರರು ಹೊರಟಿದ್ದು, ಆ ಸಂದರ್ಭದಲ್ಲಿ ಮನೆ ಮಾಲೀಕ ಉಮಾಶಂಕರ್ ಬಂದಿದ್ದಾರೆ. ಆ ಸಮಯದಲ್ಲಿ ಮಾಲೀಕರಿಗೆ ಪಿಸ್ತೂಲ್ ತೋರಿಸಿ ಹೆದರಿಸಿ ಗುಂಪು ಪರಾರಿಯಾಗಿದೆ. 40 ಲಕ್ಷ ರೂ. ಸ್ವತ್ತನ್ನು ತನ್ನೊಂದಿಗೆ ಕೊಂಡೊಯ್ದಿದೆ.
ನಿನ್ನೆ ರಾತ್ರಿ ಸರಿಯಾಗಿ 8ರಿಂದ 8:10ರ ಒಳಗೆ ದರೋಡೆ ನಡೆದಿದೆ. ದಿನಸಿ ತರಲೆಂದು ಉಮಾಶಂಕರ್ ಅಂಗಡಿಗೆ ಹೋಗಿದ್ದರು. ಅಂಗಡಿ ಹತ್ತಿರವೇ ಇರುವುದರಿಂದ ಮನೆ ಗೇಟ್‌ಗೆ ಬೀಗ ಹಾಕದೆ ಹೋಗಿದ್ದರು. ಈ ವೇಳೆ ಆರೋಪಿಗಳು ಏಕಾಏಕಿ ಮನೆಗೆ ನುಗ್ಗಿದ್ದರು. ಮನೆಯೊಳಗಿರುವ ಬೀರುಗಳನ್ನು ಒಡೆದುಹಾಕಿ ಬ್ಯಾಗಿನಲ್ಲಿ ಹಣ ತುಂಬಿಕೊಳ್ಳುತ್ತಿದ್ದಾಗ ಮನೆಗೆ ಮರಳಿದ ಉಮಾಶಂಕರ್ ಇದನ್ನು ನೋಡಿ ಶಾಕ್ ಆಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದಿನ ದರೋಡೆಯನ್ನು ಉತ್ತರಪ್ರದೇಶ ಮೂಲದ ಕಳ್ಳರ ಗ್ಯಾಂಗ್ ನಡೆಸಿರಬಹುದೆಂದು ಶಂಕಿಸಲಾಗಿತ್ತು. ಕಳೆದ ತಿಂಗಳು ದರೋಡೆಗೆ ಬಳಸಿದ ವರ್ನಾ ಕಾರಿನಲ್ಲೇ ನಿನ್ನೆ ರಾತ್ರಿ ಕೂಡ ಗುಂಪು ಬಂದು ದರೋಡೆ ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದರೋಡೆ ಪರಿಚಯಸ್ಥರಿಂದಲೇ ನಡೆದಿರುವ ಶಂಕೆ ಮೂಡಿದೆ. ದರೋಡೆಕೋರರು ಪ್ರೀ ಪ್ಲಾನ್ ಮಾಡಿಕೊಂಡು ಹಲವು ದಿನಗಳಿಂದ ಮನೆಯನ್ನು ಅಬ್ಸರ್ವ್ ಮಾಡಿದ ಶಂಕೆಯಿದೆ. ಮನೇಲಿ ಯರ್ಯಾರಿದಾರೆ, ಎಷ್ಟೊತ್ತಿಗೆ ಹೊರಗಡೆ ಹೋಗ್ತಾರೆ, ಯಾವ ಟೈಮಲ್ಲಿ ಹಣ ಕದಿಯಬಹುದು ಎಂದು ಪ್ಲಾನ್ ಮಾಡಿಕೊಂಡಿದ್ದಾರೆ. ಮಾಸ್ಕ್ ಹಾಕೊಂಡು ಪಿಸ್ತೂಲ್ ಸಮೇತ ಬಂದಿದ್ದಾರೆ.
ಮನೆ ಮಾಲೀಕರ ಹಣದ ವ್ಯವಹಾರ, ಇತ್ತೀಚೆಗೆ ಯಾವುದಾದರೂ ವ್ಯವಹಾರದಲ್ಲಿ ಜಗಳ ಆಗಿತ್ತಾ, ಹಣ ಎಲ್ಲಿಂದ ತರಲಾಗಿತ್ತು, ಯಾರ ಮೇಲಾದರೂ ಅನುಮಾನ ಇದೆಯಾ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಸಹಕಾರನಗರದಲ್ಲಿ ಪದೇ ಪದೆ ಇದೇ ರೀತಿಯ ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಒಂದೇ ಗ್ಯಾಂಗ್‌ನ ಕೈವಾಡ ಇರಬಹುದಾ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.