ಹುಬ್ಬಳ್ಳಿ: ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಅನುದಾನದ ಅಂಕಿ ಅಂಶಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಧೈರ್ಯವಿಲ್ಲ ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೇಳಿಕೊಳ್ಳಲು ಯಾವುದೇ ಸಾಧನೆಗಳಿಲ್ಲ, ಅದರಲ್ಲಿಯೂ 2004 ರಿಂದ 2014 ರ ಯುಪಿಎ ಸರ್ಕಾರದ ಸಾಧನೆಯ ವಿಷಯವಿಲ್ಲ. ರಾಜ್ಯ ಸರ್ಕಾರ ಅಭಿವೃದ್ಧಿ ಮಾಡದೇ ತನ್ನ ವೈಫಲ್ಯಗಳನ್ನು ಮರೆಮಾಚಲು ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಬಹುತೇಕ ಕುಟುಂಬ ರಾಜಕಾರಣದ ಮಕ್ಕಳೇ ಇದ್ದಾರೆ ಎಂದು ಟಾಂಗ್ ನೀಡಿದರು.
ಜೊತೆಗೆ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ರಾಜ್ಯಕ್ಕೆ 3 ಲಕ್ಷ ಶೌಚಾಲಯ, 40 ಸಾವಿರ ಉಚಿತ ಗ್ಯಾಸ್, 7 ಸಾವಿರ ಕಿ.ಮೀ ಗ್ರಾಮೀಣ ರಸ್ತೆ, 49 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್, 4.49 ಲಕ್ಷ ಮನೆ ನಿರ್ಮಿಸಿದೆ. ಅಲ್ಲದೇ 4 ಕೋಟಿ ಜನರಿಗೆ ಉಚಿತ ರೇಷನ್ ನೀಡುತ್ತಿದೆ. 44.87 ಸಾವಿರ ಕೋಟಿ ಹೆದ್ದಾರಿ ಕಾಮಗಾರಿ ಕೈಗೊಂಡಿದೆ. ಇದಲ್ಲದೇ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೇಂದ್ರ ಸರ್ಕಾರ ಮಾಡಿದೆ.
ಆದರೆ ರಾಜ್ಯ ಸರ್ಕಾರಕ್ಕೆ ಹೇಳಿಕೊಳ್ಳಲು ಯಾವೊಂದು ವಿಷಯಗಳಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಹಳೆಯ ವಿಷಯಗಳನ್ನೇ ಮುಂದಿಟ್ಟುಕೊಂಡು ಸುಳ್ಳು ಹೇಳುತ್ತಿದ್ದಾರೆ. ಹೀಗಾಗಿ ಇವರು ಹಳೆಯ ಒಡೆದ ಗ್ರಾಮಫೋನ್ ಪೆಟ್ಟಿಗೆಯಂತಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು ಗೊತ್ತಾದರು ಬರ ಪರಿಹಾರ ಕುರಿತಾಗಿ ಕೇಂದ್ರಕ್ಕೆ ತಡವಾಗಿ ಕೊಟ್ಟಿದೆ. ಹಾಗಾಗಿ ಕೇಂದ್ರದಿಂದ ಬರ ಪರಿಹಾರ ಹಂಚಿಕೆಯ ಪ್ರಕ್ರಿಯೆ ವಿಳಂಬವಾಗಿದೆ ಎಂದು ಸಮರ್ಥಿಸಿಕೊಂಡರು. ಇನ್ನೂ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆಯಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶ್ರೀಗಳ ರಾಜಕೀಯ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.