ಐತಿಹಾಸ ಕ್ಷಣಕ್ಕೆ ಸಾಕ್ಷಿಯಾದ ರಾಜಧಾನಿಯಾ ಅದ್ದೂರಿ ಕರಗ.

ಆಧುನಿಕತೆಯ ನಡುವೆಯೂ ರಾಜಧಾನಿಯ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಬೆಂಗಳೂರು ಕರಗ ಅದ್ಧೂರಿಯಾಗಿ ನೇರವೇರಿತು.
ನಗರದ ಹಳೆಯ ಪೇಟೆ ಬೀದಿಗಳಲ್ಲಿ ಮಲ್ಲಿಗೆಯ ಕಂಪು, ಸದಾ ಕಿಕ್ಕಿರಿದ ಜನ ಹಾಗೂ ವಾಹನ ದಟ್ಟಣೆಯಿಂದ ಗಿಜುಗುಡುತ್ತಿದ್ದ ರಸ್ತೆಗಳಲ್ಲಿ ಮಂಗಳವಾರ ರಾತ್ರಿಯಿಡಿ ಗೆಜ್ಜೆ ಸದ್ದು, ಪೂಜಾ ಕುಣಿತ, ವಾದ್ಯಗಳ ಸದ್ದು ಮೊಳಗಿದವು. ಇದರ ನಡುವೆ ಮಧ್ಯರಾತ್ರಿ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ಹೂವಿನ ಕರಗಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ಹೂವು ಹಾಗೂ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಮಹಾರಥದಲ್ಲಿ ಅರ್ಜುನ ಹಾಗೂ ದ್ರೌಪದಿ ದೇವಿಯ ಉತ್ಸವ ಮೂರ್ತಿಗಳನ್ನು ಹಾಗೂ ಮುತ್ಯಾಲಮ್ಮ ದೇವಿಯನ್ನು ಹೊತ್ತ ರಥದೊಂದಿಗೆ ರಾತ್ರಿ ಒಂದು ಗಂಟೆ ಸುಮಾರಿಗೆ ಉತ್ಸವ ಮೂರ್ತಿಗಳು ಸಾಗಿದವು.

ಇದರ ಬೆನ್ನಲ್ಲೇ ಮಲ್ಲಿಗೆ ಹೂವಿನಿಂದ ಅಲಂಕೃತವಾಗಿದ್ದ ಹೂವಿನ ಕರಗ ಹೊತ್ತು ಅರ್ಚಕ ಜ್ಞಾನೇಂದ್ರ ದೇವಾಲಯದಿಂದ ಹೊರ ಬರುತ್ತಿದ್ದಂತೆ ನೆರೆದಿದ್ದ ಭಕ್ತರು ‘ಗೋವಿಂದ ಗೋವಿಂದ’ ನಾಮಸ್ಮರಣೆ ಮಾಡುತ್ತ ಕರಗದ ಮೇಲೆ ಹೂವಿನ ಮಳೆಗರೆದರು.
ಶಕ್ತಿ ದೇವತೆ ದ್ರೌಪದಿ ದೇವಿಯ ಹೆಸರಿನಲ್ಲಿ ನಡೆಯುವ ಹೂವಿನ ಕರಗ ಉತ್ಸವದ ನಿಮಿತ್ತ ಮಂಗಳವಾರ ಸಂಜೆ ಚಂದ್ರೋದಯವಾಗುತ್ತಿದ್ದಂತೆ ಶ್ರೀ ಧರ್ಮರಾಯ ದೇವಸ್ಥಾನದ ಅರ್ಚಕರಾದ ಜ್ಞಾನೇಂದ್ರ ಅವರು, ಗೌಡರು, ಗಣಾಚಾರಿ, ಗಂಟೆ ಪೂಜಾರಿಯ ಉಸ್ತುವಾರಿಯಲ್ಲಿ ನೂರಾರು ವೀರಕುಮಾರರ ನಡುವೆ ಮಂಗಳವಾದ್ಯಗಳೊಂದಿಗೆ ಕಬ್ಬನ್ ಪಾರ್ಕ್ನಲ್ಲಿರುವ ಕರಗದ ಕುಂಟೆಯಲ್ಲಿ ಪುಣ್ಯ ಸ್ನಾನ ಮಾಡಿ ಗಂಗಾ ಪೂಜೆ ನೆರವೇರಿಸಿದರು.



