Top Newsರಾಜ್ಯಸುದ್ದಿ

ಗ್ಯಾಸ್‌ ಸಿಲಿಂಡರ್‌ ಬ್ಲಾಸ್ಟ್‌; ಮನೆಗಳು ಛಿದ್ರ! ಒಂದೇ ಕುಟುಂಬದ ನಾಲ್ವರಿಗೆ ಗಂಭೀರ ಗಾಯ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭೀಕರ ಗ್ಯಾಸ್‌ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಮನೆಗಳು ಛಿದ್ರಗೊಂಡಿವೆ. ಈ ದುರ್ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಂಭೀರವಾಗಿ ಗಾಯಗೊಂಡಿದ್ದು, ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

ಬೆಂಗಳೂರು: ಸಿಲಿಂಡರ್ ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಫೋಟದಲ್ಲಿ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ.  ಡಿ. ಜೆ ಹಳ್ಳಿಯ 3ನೇ ಕ್ರಾಸ್‌ನಲ್ಲಿರುವ ಆನಂದ್ ಥಿಯೇಟರ್ ಬಳಿಯಿರುವ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದೆ.ಸೈಯದ್ ನಾಸಿರ್ ಪಾಶಾ, ಅವರ ಪತ್ನಿ ತಸೀನಾ ಬಾನು, 7 ವರ್ಷದ ಮಗ ಹಾಗೂ 5 ವರ್ಷದ ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೀವನೋಪಾಯಕ್ಕಾಗಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಸೈಯದ್ ನಾಸೀರ್,  ಮನೆಯ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಆನ್ ಮಾಡಿಟ್ಟಿದ್ದರು.

11.30ಕ್ಕೆ ಮನೆಗೆ ಮರಳುತ್ತಿದ್ದಂತೆ ಗ್ಯಾಸ್ ವಾಸನೆ ಬಂದಿದೆ. ತಕ್ಷಣ ರೆಗ್ಯೂಲೇಟರ್ ತೆಗೆದು ಮನೆಯಿಂದ ಪತ್ನಿ ಮಕ್ಕಳನ್ನ ದೂರ ಕಳಿಸಲು ಮುಂದಾಗಿದ್ದರು. ಜೊತೆಗೆ ಗ್ಯಾಸ್ ವಾಸನೆ ಹೋಗಲಿ ಎಂದು ಫ್ಯಾನ್ ಆನ್ ಮಾಡಿದ್ದರು. ಆದರೆ ಮನೆಯಲ್ಲೆಲ್ಲ ತುಂಬಿಕೊಂಡಿದ್ದ ಗ್ಯಾಸ್ ಒಮ್ಮೆಲೆ ಸ್ಫೋಟಕ್ಕೆ ಕಾರಣವಾಗಿದೆ. ಸ್ಫೋಟದ ತೀವ್ರತೆಗೆ ನಾಲ್ವರು ಗಂಭೀರವಾಗಿ ಗಾಯಗೊಂಡರೆ, ಮನೆಯ ಮೇಲ್ಛಾವಣಿ ಹಾರಿಹೋಗಿದೆ. ಸ್ಫೋಟದಿಂದ ಅಕ್ಕಪಕ್ಕದಲ್ಲಿದ್ದ ಕೆಲ ಮನೆಗಳಿಗೂ ಹಾನಿಯಾಗಿದ್ದು, ಕಿಟಕಿ ಗಾಜುಗಳು ಪುಡಿಯಾಗಿವೆ. ಸ್ಥಳಕ್ಕೆ ಡಿ.ಜೆ ಹಳ್ಳಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ತಿಂಗಳು ಉಡುಪಿಯಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಪಾರ್ಟಿ  ಮಾಡುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ   ಪರಿಣಾಮ ಅಪಾರ ಪ್ರಮಾಣದ ಹಾನಿ ಉಂಟಾದ ಘಟನೆ ಉಡುಪಿ ಕಲ್ಸಂಕ ಸಮೀಪದ ಬಡಗುಪೇಟೆ ರಸ್ತೆಯ ಅಪಾರ್ಟ್ ಮೆಂಟ್‌ವೊಂದರಲ್ಲಿ ನಡೆದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

ಮೂರು ಅಂತಸ್ತಿನ ಅಪಾರ್ಟ್ ಮೆಂಟ್‌ನ ಮೂರನೇ ಮಹಡಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಲೀಕ್ ಆದ ಪರಿಣಾಮ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯ ಗೋಡೆಯಲ್ಲಾ ಛಿದ್ರ ಛಿದ್ರವಾಗಿವೆ. ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಕೊಠಡಿಯಲ್ಲಿ ಪಾರ್ಟಿ ಮಾಡುತ್ತಿದ್ದವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಸ್ಫೋಟ ಸಂಭವಿಸುವ ವೇಳೆ ಮನೆಯಲ್ಲಿ ಮಕ್ಕಳ ಸಹಿತ 8 ಮಂದಿ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ.

Comments (0)

Your email address will not be published. Required fields are marked *

Back to top button