ಬೆಂಗಳೂರು :  ಸಿಲಿಕಾನ್ ಸಿಟಿ ರಾಜ್ಯ ರಾಜಧಾನಿ ಬೆಂಗಳೂರಿನ ಮಾಜಿ ಡಾನ್‌, ಮಾಜಿ ರೌಡಿಶೀಟರ್‌ ಎಚ್‌.ಎಂ ಕೃಷ್ಣಮೂರ್ತಿ ಅಲಿಯಾಸ್‌ ಜೇಡರಹಳ್ಳಿ ಕೃಷ್ಣಪ್ಪನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮೇಲೆ ಹಲವು ಸೆಕ್ಷನ್‌ಗಳಡಿ ಕೇಸುಗಳನ್ನು ದಾಖಲಿಸಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ 16 ಎಕರೆ ಜಮೀನು ಕಬಳಿಕೆಗೆ ಯತ್ನಿಸಿದ ಪ್ರಕರಣದಡಿ ಜೇಡರಹಳ್ಳಿ ಕೃಷ್ಣ ಅರೆಸ್ಟ್ ಆಗಿದ್ದಾನೆ.

ಯಶವಂತಪುರ ಹೋಬಳಿಗೆ ಸೇರಿದ ಹೆರೋಹಳ್ಳಿ ಗ್ರಾಮದ ಸರ್ವೆ ನಂಬರ್‌ 23ರಲ್ಲಿನ 16 ಎಕರೆ 37 ಗುಂಟೆ ಜಮೀನಿಗೆ ಸಂಬಂಧಿಸಿ ಜೇಡರಹಳ್ಳಿ ಕೃಷ್ಣಪ್ಪ ಮತ್ತು ಮತ್ತಿತರರು ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಲು ಪ್ರಯತ್ನಿಸಿದ್ದಾರೆ. ಜತೆಗೆ, ತಮ್ಮ ಮೇಲೆ ಹಲ್ಲೆನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಜಮೀನು ಮಾಲೀಕ ಎನ್‌.ಶಂಕರಪ್ಪ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಎಚ್‌.ಎಂ. ಕೃಷ್ಣಮೂರ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಹೇರೋಹಳ್ಳಿ ಗ್ರಾಮದ ನಿವಾಸಿ ಶಂಕರಪ್ಪ ಎಂಬವರು 16 ಎಕರೆ 37 ಗುಂಟೆ ಜಮೀನು ಹೊಂದಿದ್ದಾರೆ. ಇದು ಶಂಕರಪ್ಪ ಅವರ ಪಿತ್ರಾರ್ಜಿತ ಆಸ್ತಿ ಎನ್ನಲಾಗಿದ್ದು, ಅದರ ಮೇಲೆ ಕೃಷ್ಣಪ್ಪ ಕಣ್ಣು ಹಾಕಿದ್ದರು. ಶಂಕರಪ್ಪ ಅವರು ತಮ್ಮ ಪಾಲಿನ ನಾಲ್ಕು ಎಕರೆ 13 ಗುಂಟೆ ಜಾಗವನ್ನು ಅಭಿವೃದ್ಧಿ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಅಲ್ಲಿಗೆ ಬಂದಿದ್ದ ಜೇಡರಹಳ್ಳಿ ಕೃಷ್ಣಪ್ಪ, ಗೋವಿಂದರಾಜು ಹಾಗೂ ಇತರರು ಶಂಕ್ರಪ್ಪ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಜಮೀನು ನಮ್ಮ ಹೆಸರಿನಲ್ಲಿದ್ದು, ನೀವು ಮುಟ್ಟುವಂತಿಲ್ಲ ಎಂದು ಆವಾಜ್‌ ಹಾಕಿದ್ದಾರೆ.

ದಾಖಲೆಗಳ ಪ್ರಕಾರ ಇದು ಶಂಕರಪ್ಪ ಕುಟುಂಬಕ್ಕೆ ಪಿತ್ರಾರ್ಜಿತವಾಗಿ ಬಂದಿರುವ ಜಮೀನು. ಆದರೆ, ಜೇಡರಹಳ್ಳಿ ಕೃಷ್ಣಪ್ಪ ಮತ್ತು ತಂಡ ತೋರಿಸುವ ದಾಖಲೆಗಳ ಪ್ರಕಾರ ಶಂಕರಪ್ಪ ಅವರ ತಂದೆ ನರಸಿಂಹಯ್ಯ ಅವರು 2024ರ ಜ.16ರಂದು ನೋಂದಾಯಿತ ಕ್ರಯ ಮಾಡಿಕೊಟ್ಟಿದ್ದಾರೆ. ಅಚ್ಚರಿ ಎಂದರೆ ಶಂಕರಪ್ಪ ಅವರ ತಂದೆ ನರಸಿಂಹಯ್ಯ 2015ರಲ್ಲಿಯೇ ಮೃತಪಟ್ಟಿದ್ದರು! ಹೀಗಾಗಿ ಇದೊಂದು ನಕಲಿ ದಾಖಲೆ ಎಂದು ಹೇಳಲಾಗಿದೆ.
ಇದೀಗ ಶಂಕರಪ್ಪ ಅವರು ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಜೇಡರಹಳ್ಳಿಯನ್ನು ಎ 1 ಎಂದು ಗುರುತಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೇಡರಹಳ್ಳಿ ಕೃಷ್ಣಪ್ಪ ಸೇರಿ ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸೆಕ್ಷನ್ 506, 341, 34, 504, 406, 420, 465, 468, 471 ಮತ್ತು 323ರ ಅಡಿಯಲ್ಲಿ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಜೇಡರಹಳ್ಳಿ ಕೃಷ್ಣಪ್ಪನ ಮೇಲೆ ಹಲವು ಅಪರಾಧ ಪ್ರಕರಣಗಳ ರೌಡಿ ಶೀಟ್‌ ಇದೆ. ಅದರ ಜತೆಗೆ ಆತ ರಾಜಕೀಯದಲ್ಲೂ ಸಕ್ರಿಯನಾಗಿದ್ದ. ಭೂಗತ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ಎಚ್‌.ಎಂ. ಕೃಷ್ಣಮೂರ್ತಿ 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜಾಜಿನಗರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ.

By admin

Leave a Reply

Your email address will not be published. Required fields are marked *

Verified by MonsterInsights