ಬಂಗಾಳ ರಾಜಕೀಯದ ಚಾಣಕ್ಯ ಎಂದೇ ಖ್ಯಾತರಾಗಿದ್ದ ಮಾಜಿ ಕೇಂದ್ರ ರೈಲ್ವೆ ಸಚಿವ ಮುಕುಲ್ ರಾಯ್ ತಮ್ಮ 71ನೇ ವಯಸ್ಸಿನಲ್ಲಿ ಕೋಲ್ಕತ್ತಾದ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಕೋಮಾದಲ್ಲಿದ್ದರು,ಕಳೆದ ಎರಡು ವರ್ಷಗಳಿಂದ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದು, ಸ್ಮರಣಶಕ್ತಿಯನ್ನು ಕಳೆದುಕೊಂಡಿದ್ದ ಅವರಿಗೆ ಕೇವಲ ದ್ರವ ಆಹಾರವನ್ನು ನೀಡಲಾಗುತ್ತಿತ್ತು. ಅಂತಿಮವಾಗಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮುಕುಲ್ ರಾಯ್ ಅವರ ರಾಜಕೀಯ ಜೀವನವು ಅತ್ಯಂತ ರೋಚಕ ತಿರುವುಗಳಿಂದ ಕೂಡಿದ್ದು, 1998ರಲ್ಲಿ ಮಮತಾ ಬ್ಯಾನರ್ಜಿ ಅವರೊಂದಿಗೆಕಾಂಗ್ರೆಸ್ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಬೆಳೆದ ಅವರು ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಅತ್ಯಂತ ಆಪ್ತ ಮತ್ತು ಪಕ್ಷದ ಎರಡನೇ ಶಕ್ತಿಯುತ ನಾಯಕ ಎಂದು ಗುರುತಿಸಲ್ಪಟ್ಟಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿ ಬಂಗಾಳದಲ್ಲಿಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಸಂಘಟನಾತ್ಮಕವಾಗಿ ದೊಡ್ಡ ಶಕ್ತಿಯಾಗಿದ್ದರು.
2017ರಲ್ಲಿ ಅಚ್ಚರಿಯ ನಿರ್ಧಾರದಂತೆ ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವಂತೆ ಮಾಡುವಲ್ಲಿ ಇವರ ಕಾರ್ಯತಂತ್ರಗಳು ಯಶಸ್ವಿಯಾಗಿದ್ದವು. 2021ರ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣನಗರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಜಯಗಳಿಸಿದರೂ, ಶೀಘ್ರದಲ್ಲೇ ಪಕ್ಷದೊಳಗಿನ ತಮ್ಮ ಪ್ರಭಾವ ಕುಗ್ಗಿದ್ದರಿಂದ ಮತ್ತೆ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಟಿಎಂಸಿ ಸೇರಿದರು.
ಅವರ ಕೊನೆಯ ದಿನಗಳು ರಾಜಕೀಯ ಸಂಘರ್ಷಗಳಿಂದ ಕೂಡಿದ್ದವು. 2021ರಲ್ಲಿ ಬಿಜೆಪಿಯಿಂದ ಗೆದ್ದು ಟಿಎಂಸಿಗೆ ಮರಳಿದ್ದನ್ನು ಪ್ರಶ್ನಿಸಿ ಕಾನೂನು ಹೋರಾಟಗಳು ನಡೆದಿದ್ದವು. ಅಂತಿಮವಾಗಿ 2025ರಲ್ಲಿ ಕಲ್ಕತ್ತಾ ಹೈಕೋರ್ಟ್ ಅವರನ್ನು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ತೀರ್ಪು ನೀಡಿತು. ಒಬ್ಬ ಚಾಣಾಕ್ಷ ಸಂಘಟನಾಕಾರನಾಗಿ ಬಂಗಾಳದ ರಾಜಕೀಯ ಭೂಪಟವನ್ನು ಬದಲಿಸಿದ ಮುಕುಲ್ ರಾಯ್ ನಿಧನವು ರಾಜ್ಯದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. #Kolkata


