ಬೆಂಗಳೂರು: ನನ್ನ ಸುತ್ತಮುತ್ತಲಿನ 40 ಜನರ ಫೋನ್ʼಗಳನ್ನು ರಾಜ್ಯ ಸರಕಾರ ಟ್ಯಾಪ್ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರೇವಣ್ಣ ಅವರ ಫೋನ್ ಸೇರಿದಂತೆ ನನ್ನ ಸುತ್ತಮುತ್ತ ಇರುವ ಎಲ್ಲರ ಫೋನ್ ಗಳನ್ನೂ ಸರಕಾರ ಟ್ಯಾಪ್ ಮಾಡಿಸುತ್ತಿದೆ. ನನ್ನ ಫೋನ್ ಕೂಡ ಟ್ಯಾಪ್ ಆಗುತ್ತಿದೆ ಎಂದು ದೂರಿದರು.

ರಾಜಕೀಯವಾಗಿ ನಮ್ಮ ಕುಟುಂಬವನ್ನು ಮುಗಿಸಲೇಬೇಕು ಎಂದು ಈ ಸರಕಾರ ತೀರ್ಮಾನಕ್ಕೆ ಬಂದಿದೆ. ಅದು ಆಡಿಯೋ ಟೇಪುಗಳಲ್ಲಿಯೇ ಬಯಲಾಗಿದೆ. ಹೀಗಾಗಿ ನಮ್ಮ ಕುಟುಂಬದ ಎಲ್ಲರ ಮೊಬೈಲ್ ಫೋನ್ ಗಳನ್ನು ಸರಕಾರ ಕದ್ದಾಲಿಕೆ ಮಾಡಿಸುತ್ತಿದೆ. ಯಾರನ್ನೂ ಇವರು ಬಿಟ್ಟಿಲ್ಲ, ಎಲ್ಲರ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಫೋನ್ ಟ್ಯಾಪ್ ಮಾಡುವಂಥ ಮುಟ್ಟಾಳ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರಲ್ಲ ಎಂದು ಮಾಧ್ಯಮಗಳು ಗಮನ ಸೆಳೆದಾಗ, ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ ಡಿಕೆಶಿ ಹೇಳೋದು ಎಂದರು ಅವರು.

ರಾಜೀನಾಮೆಗೆ ಮುಂದಾಗಿದ್ದ ಮಾಜಿ ಪ್ರಧಾನಿಗಳು

ಈ ಪ್ರಕರಣದಿಂದ ಮನ ನೊಂದ ದೇವೇಗೌಡರು ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೋಡಲು ಮುಂದಾಗಿದ್ದರು ಎನ್ನುವ ಅಂಶವನ್ನು ಇದೇ ವೇಳೆ ಬಹಿರಂಗಪಡಿಸಿದರು ಹೆಚ್.ಡಿ.ಕುಮಾರಸ್ವಾಮಿ ಅವರು. ಅರವತ್ತು ವರ್ಷಗಳ ತಮ್ಮ ನಿಷ್ಕಳಂಕ ರಾಜಕೀಯ ಜೀವನಕ್ಕೆ ಗಾಯ ಮಾಡಿದ ಈ ಘಟನೆಯಿಂದ ಮಾಜಿ ಪ್ರಧಾನಿಗಳು ಬಹಳ ನೊಂದಿದ್ದಾರೆ. ನಾನು ಹೇಗೆ ಹೋಗಿ ರಾಜ್ಯಸಭೆಯಲ್ಲಿ ಕೂರಲಿ ಎಂದು ಕಣ್ಣೀರು ಹಾಕಿದ್ದರು. ಆದರೆ, ನಾನೇ ಅವರ ಮನವೊಲಿಸಿದೆ. ರಾಜ್ಯದ ಹಿತಕ್ಕಾಗಿ ನೀವು ರಾಜೀನಾಮೆ ಕೊಡಬಾರದು. ನೀರಾವರಿ ಸೇರಿದಂತೆ ಅನೇಕ ವಿಷಯಗಳಲ್ಲಿ ನಿಮ್ಮಿಂದ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ. ಇನ್ನೂ ನೀರಾವರಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ನೀವು ರಾಜೀನಾಮೆ ಕೊಟ್ಟರೆ ರಾಜ್ಯಕ್ಕೆ ನಷ್ಟ ಆಗುತ್ತದೆ. ರಾಜ್ಯದ ನೀರಾವರಿ ಯೋಜನೆಗಳ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಲು ನೀವು ಬೇಕು. ದಯಮಾಡಿ ನಿಮ್ಮ ನಿರ್ಧಾರ ಬದಲಿಸಿಕೊಳ್ಳಿ ಎಂದು ನಾನು ಮನವಿ ಮಾಡಿಕೊಂಡೆ ಎಂದರು.

By admin

Leave a Reply

Your email address will not be published. Required fields are marked *

Verified by MonsterInsights