ಬೆಂಗಳೂರು: ಹಾವೇರಿ ಜಿಲ್ಲೆಗೆ ಅಗತ್ಯವಿರುವ ಡಿಎಪಿ, ಯುರಿಯಾ ಹಾಗೂ ಕಾಂಪ್ಲೆಕ್ಸ್ ಗೊಬ್ಬರವನ್ನು ಕೂಡಲೇ ಸರಬರಾಜು ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿ ಸಚಿವ ಚಲುವರಾಯಸ್ವಾಮಿಗೆ ಆಗ್ರಹಿಸಿದ್ದಾರೆ.

ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಪತ್ರ ಬರೆದಿರುವ ಅವರು, ತಮಗೆ ಈಗಾಗಲೇ ಮಾಹಿತಿಯಿರುವಂತೆ ಕಳೆದ ಒಂದು ವರ್ಷ ನಮ್ಮ ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಕಳೆದ ವರ್ಷ ಅವರು ಬಿತ್ತನೆ ಬೀಜ, ಗೊಬ್ಬರ ಹಾಗೂ ಇತರೆ ಕೃಷಿ ಚಟುವಟಿಕೆಗಳಿಗೆ ವೆಚ್ಚವನ್ನು ಮಾಡಿ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಹಾಗೂ ಸಾಲದ ಹೊರೆ ರೈತರ ಮೇಲೆ ಹೆಚ್ಚಾಗಿ ಇದ್ದು, ಕೆಲವರಂತೂ ಆತ್ಮಹತ್ಯೆಗೆ ಶರಣಾಗಿರುತ್ತಾರೆ. ತಾವು ರೈತರಿಗೆ ಪರಿಹಾರ ಕೊಟ್ಟಿರುವುದು ಅತ್ಯಲ್ಪ ಹಾಗೂ ತಡವಾಗಿದೆ ಮತ್ತು ತಮ್ಮ ಇಲಾಖೆ ತಿಳಿಸಿದಂತೆ ಆಹಾರ ಧಾನ್ಯ ಉತ್ಪಾದನೆಯಲ್ಲಿ ಶೇಖಡ 50% ಕಡಿಮೆಯಾಗಿದೆ.

ಮೇಲೆ ಕಾಣಿಸಿದ ಎಲ್ಲಾ ಕಾರಣಗಳು ಮತ್ತು ಇತ್ತೀಚಿಗೆ ಬೀಳುತ್ತಿರುವ ಮುಂಗಾರು ಮಳೆಯಿಂದ ರೈತರು ಉತ್ಸುಕರಾಗಿ ಬಿತ್ತನೆ ಮಾಡಲು ಸಿದ್ದರಾಗಿದ್ದು, ಅದಕ್ಕಾಗಿ ಗೊಬ್ಬರ ಪಡೆದುಕೊಳ್ಳಲು ಮುಂದೆ ಬಂದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯಲ್ಲಿ ಗೊಬ್ಬರ ದಾಸ್ತಾನು ಕಡಿಮೆಯಿದ್ದು ನೂಕು- ನುಗ್ಗಲು ಆಗುವ ಪರಿಸ್ಥಿತಿ ಬಂದಿದೆ.

ಹಾವೇರಿ ಜಿಲ್ಲೆಯಲ್ಲಿ ಡಿ.ಎ.ಪಿ. ಗೊಬ್ಬರ ಬಿತ್ತನೆ ಪೂರ್ವದಲ್ಲಿ ಬಹಳಷ್ಟು ಅವಶ್ಯಕತೆಯಿದ್ದು ಸುಮಾರು 35,000 ಮೆಟ್ರಿಕ್ ಟನ್ ಮುಂಗಾರು ಹಂಗಾಮಿನಲ್ಲಿ ಬೇಕಾಗಿರುತ್ತದೆ. ಇಲ್ಲಿಯವರೆವಿಗೂ ಸುಮಾರು 6,500 ಮೆಟ್ರಿಕ್ ಟನ್ ಮಾತ್ರ ಸರಬರಾಜು ಆಗಿದೆ. ಕೂಡಲೇ ಬಾಕಿಯಿರುವ 29,000 ಮೆಟ್ರಿಕ್ ಟನ್ ಗೊಬ್ಬರವನ್ನು ಹಾವೇರಿ ಜಿಲ್ಲೆಗೆ ಒದಗಿಸಬೇಕೆಂದು ಆಗ್ರಹ ಮಾಡುತ್ತೇನೆ. ಇದೇ ರೀತಿ ಯೂರಿಯಾ 65000 ಮೆಟ್ರಿಕ್ ಟನ್ ಮತ್ತು ಕಾಂಪ್ಲೆಕ್ಸ್ 38000 ಮೆಟ್ರಿಕ್ ಟನ್ ಇದನ್ನು ಕೂಡಲೇ ಸರಬರಾಜು ಮಾಡಲು ಕ್ರಮ ಜರುಗಿಸಬೇಕು.

ರಾಜ್ಯಾದ್ಯಂತ ಮಳೆಯಾಗಿರುವುದರಿಂದ ಗೊಬ್ಬರ ತಯಾರಿಕಾ ಕಂಪನಿಗಳ ಹಾಗೂ ಅಧಿಕಾರಿಗಳ ಸಭೆ ಕರೆದು ತಾವು ಮತ್ತು ತಮ್ಮ ಇಲಾಖೆಯಿಂದ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

By admin

Leave a Reply

Your email address will not be published. Required fields are marked *

Verified by MonsterInsights
Did you find this content engaging?