ಬಿಗ್ ಎಕ್ಸ್ ಕ್ಲೂಸಿನ್ ಸ್ಟೋರಿ
ಬೆಂಗಳೂರು: AC ನ್ಯಾಯಾಲಯಗಳಲ್ಲಿ ದಾಖಲಾಗುವ ಅರ್ಜಿಗಳು ಹಾಗು ಮೇಲ್ಮನವಿ ಅರ್ಜಿಗಳ ಸಂಬಂಧಿಸಿದ ಅರೆನ್ಯಾಯಿಕ ಪ್ರಕರಣಗಳ RCCMS ತಂತ್ರಾಶದ ಮೂಲಕ ಸರಿಯಾದ ನಿರ್ವಹಣೆ ಆಗದೇ ಇರೋದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. RCCMS ತಂತ್ರಾಶದ ಮೂಲಕ ನಿರ್ವಹಿಸದೇ ಇರುವ ಪ್ರಕರಣಗಳಲ್ಲಿ ಭ್ರಷ್ಟಾಚಾರ ನಡೆದಿರುವ ದೂರುಗಳು ಬಂದ ಹಿನ್ನಲೆಯಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ವಿಶೇಷ ತನಿಖಾ ತಂಡವನ್ನು ರಚಿಸಲು ಆದೇಶಿಸಿದ್ದಾರೆ.
ಈ ಹಿನ್ನಲೆಯಲ್ಲಿ ಕೆಎಎಸ್ ಅಧಿಕಾರಿ ವಿಶೇಷ ಜಿಲ್ಲಾಧಿಕಾರಿ ಸಂಗಪ್ಪ ಅಧ್ಯಕ್ಷತೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ACಗಳ ಅಕ್ರಮಗಳ ತನಿಖೆಗೆ 12 ಅಧಿಕಾರಿಗಳ ತನಿಖಾ ತಂಡವನ್ನು ರಚಿಸಿ ಇಂದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ವಿಮಲಮ್ಮ ಆದೇಶವನ್ನು ಹೊರಡಿಸಿದ್ದಾರೆ.
ನಿನ್ನೆ ಕಂದಾಯ ಇಲಾಖೆಯ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ನಡೆದ ಕಂದಾಯ ಇಲಾಖೆ ಉಪ ವಿಭಾಗದಿಕಾರಿಗಳ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಅಕ್ರಮಗಳ ಕುರಿತು ಖುದ್ದು ಸಚಿವರೇ ಪ್ರಶ್ನಿಸಿದ್ರು. ಅದರಲ್ಲೂ ಬೆಂಗಳೂರು ಉತ್ತರ ವಲಯದಲ್ಲಿ 5419 ಹಾಗೂ ಬೆಂ.ದಕ್ಷಿಣ ವಲಯದಲ್ಲಿ 4351 ಪ್ರಕರಣಗಳು ಬಾಕಿ ಇವೆ. ಅಲ್ಲದೆ, ಈ ಎರಡೂ ವಿಭಾಗದಲ್ಲಿ ಅಧಿಕಾರಿಗಳು ಶೇ.65ಕ್ಕಿಂತ ಹೆಚ್ಚು ತನ್ನ ಕಾರ್ಯಕ್ಷೇತ್ರದ (ಜ್ಯೂರಿ ಸೆಕ್ಷನ್) ಹೊರಗಿನ ಪ್ರಕರಣಗಳನ್ನೂ ದಾಖಲಿಸಿಕೊಂಡಿದ್ದಾರೆ. ಪ್ರಕರಣಗಳ ಇತ್ಯರ್ಥವೂ ಆಮೆ ಗತಿಯಲ್ಲಿ ಸಾಗಿದೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ಇದೇ ವೇಳೆ ಬೆಂ.ಉತ್ತರ ವಿಭಾಗಾಧಿಕಾರಿ ಪ್ರಮೋದ್ ಪಾಟೀಲ್ ಹಾಗೂ ಬೆಂ.ದಕ್ಷಿಣ ವಿಭಾಗಾಧಿಕಾರಿ ರಜನೀಕಾಂತ್ ಚೌಹ್ಹಾಣ್ ವಿರುದ್ಧ ಆಕ್ರೋಶ ಹೊರಹಾಕಿದ ಸಚಿವರು, ನಿಮ್ಮ ಕಾರ್ಯಕ್ಷೇತ್ರದ ಹೊರಗಿನ ಪ್ರಕರಣಗಳನ್ನೂ ಕಾನೂನು ಬಾಹಿರವಾಗಿ ದಾಖಲಿಸಿಕೊಂಡಿದ್ದೀರ. ಹೀಗೆ ಮಾಡಲು ಎಷ್ಟು ಹಣ ತೆಗೆದುಕೊಂಡಿರಿ ಎಂದು ಖಾರವಾಗಿ ಪ್ರಶ್ನಿಸಿದರು. ಅಲ್ಲದೆ, ನಾವು ಒಳ್ಳೆಯ ಮಾತಿನಿಂದ ಹೇಳಿದರೆ ನಿಮ್ಮ ತಲೆಗೆ ಹೋಗೋದೆ ಇಲ್ಲ, ನಿಮಗೆ ನಿಮ್ಮ ಭಾಷೆಯಲ್ಲೇ ಉತ್ತರ ನೀಡಬೇಕು ಎಂದು ಎಚ್ಚರಿಸಿದರು.

ಬಳಿಕ ಎಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗದ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿ ಕಠಿಣ ಕ್ರಮ ಜರುಗಿಸುವಂತೆಯೂ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.ಈ ಹಿನ್ನಲೆಯಲ್ಲಿ ತನಿಖಾ ತಂಡ ಸಮಗ್ರ ವಿಚಾರಣೆ ನಡೆಸಿ ಹಲವು ಶಿಫಾರಸ್ಸುಗಳ ಜೊತೆಗೆ ತನಿಖಾ ವರದಿಯನ್ನು ಸಲ್ಲಿಸುವ ಜವಬ್ದಾರಿಯನ್ನು ನೀಡಲಾಗಿದೆ.ತನಿಖಾ ವರದಿ ಆಧಾರದ ಮೇಲೆ ಭ್ರಷ್ಟಚಾರ ನಡೆಸಿರುವ ಎಸಿಗಳ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.


