ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ವರ್ಷಗಳ ಬಳಿಕ ಮೊದಲ ಬಾರಿ ನಡೆದ ವಿಧಾನಸಭೆ ಅಧಿವೇಶನದ ಮೊದಲ ದಿನ ಕೋಲಾಹಲಕ್ಕೆ ಸಾಕ್ಷಿಯಾಯಿತು. ಇತ್ತೀಚಿಗೆ ಚುನಾಯಿತಗೊಂಡ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಪ್ರಥಮ ಅಧಿವೇಶನ ಸೋಮವಾರ ಬೆಳಿಗ್ಗೆ ಆರಂಭಗೊಂಡಿತ್ತು. ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದತಿ ವಿರುದ್ಧ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಶಾಸಕ ವಹೀದ್ ಪಾರಾ ನಿರ್ಣಯ ಮಂಡಿಸಿದ ಬಳಿಕ ಈ ಗದ್ದಲ ನಡೆದಿದೆ.
ತಾವು ಅಂತಹ ಯಾವುದೇ ನಿರ್ಣಯವನ್ನು ಇನ್ನೂ ಸ್ವೀಕರಿಸಿಲ್ಲ ಎಂಬುದಾಗಿ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್‌ನ ಸ್ಪೀಕರ್ ರಹೀಮ್ ರಾದರ್ ಸ್ಪಷ್ಟನೆ ನೀಡಿದರೂ, ಪಾರಾ ಅವರ ನಿರ್ಣಯದ ವಿರುದ್ಧ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಕೇಂದ್ರ ಸರ್ಕಾರವು 2019ರ ಅಗಸ್ಟ್ ತಿಂಗಳಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿತ್ತು. ವಿಶೇಷ ಸ್ಥಾನಮಾನವನ್ನು ಮರು ಸ್ಥಾಪನೆ ಮಾಡಬೇಕು ಎಂದು ಪಿಡಿಪಿ ಆಗ್ರಹಿಸಿದೆ.
ಪುಲ್ವಾಮಾ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಪಾರಾ, ಹೊಸದಾಗಿ ಆಯ್ಕೆಯಾಗಿರುವ ಸ್ಪೀಕರ್ ಅಬ್ದುಲ್ ರಹೀಮ್ ರಾದರ್ ಅವರಿಗೆ ನಿರ್ಣಯ ಮಂಡಿಸಿದರು. ಇದು ಐದು ದಿನಗಳ ಕಾಲ ನಡೆಯುವ ವಿಧಾನಸಭೆ ಅಧಿವೇಶನದ ಕಾರ್ಯಸೂಚಿಯಲ್ಲಿ ಇಲ್ಲದಿದ್ದರೂ ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದ್ದರು.
ಫಲಿತಾಂಶ ಬೇರೆಯೇ ಇರುತ್ತಿತ್ತು
ಈ ವಿಚಾರದ ಕುರಿತು ನಿರ್ಣಯ ಮಂಡನೆಯಾಗಲಿದೆ ಎನ್ನುವುದು ತಮಗೆ ತಿಳಿದಿತ್ತು. 2019ರ ಆಗಸ್ಟ್ 5ರಂದು ತೆಗೆದುಕೊಂಡ ನಿರ್ಧಾರವನ್ನು ಜಮ್ಮು ಮತ್ತು ಕಾಶ್ಮೀರದ ಜನತೆ ಒಪ್ಪುವುದಿಲ್ಲ ಎನ್ನುವುದು ವಾಸ್ತವ. ಅವರು ಒಪ್ಪಿಕೊಂಡಿದ್ದರೆ, ಇಂದಿನ ಫಲಿತಾಂಶ ಬೇರೆಯದೇ ಇರುತ್ತಿತ್ತು ಎಂದು ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಕಣಿವೆ ರಾಜ್ಯದಲ್ಲಿ 370ನೇ ವಿಧಿಯನ್ನು ಬಿಜೆಪಿ ಮರಳಿ ಸ್ಥಾಪಿಸುತ್ತದೆ ಎಂದು ನಿರೀಕ್ಷಿಸುವುದೇ ಮೂರ್ಖತನ ಎಂದು ಅವರು ಈ ಹಿಂದೆ ಹೇಳಿದ್ದರು.
Protests in the J&K Assembly after PDP member Waheed Para requested the speaker to accept his resolution against the abrogation of 370.#JKAssembly #Article370 #PDP #NationalConference #JammuKashmir #Protests #RestorationOfSpecialStatus #StatehoodDemand #greaterjammu pic.twitter.com/zri9moIGi3
— Greater jammu (@greater_jammu) November 4, 2024
ತಮ್ಮ ನಡೆ ಸಮರ್ಥಿಸಿಕೊಂಡ ಶಾಸಕ ಪಾರಾ, “ಸದನದ ಕಾರ್ಯಸೂಚಿ ಅಂತಿಮಗೊಂಡಿದ್ದರೂ, ಜನರ ಭಾವನೆಗಳನ್ನು ದೊಡ್ಡ ಮಟ್ಟದಲ್ಲಿ ಪ್ರತಿಫಲಿಸುತ್ತದೆ ಎಂಬ ಕಾರಣಕ್ಕಾಗಿ ನಿರ್ಣಯವನ್ನು ಅಜೆಂಡಾದಲ್ಲಿ ಸೇರಿಸುವ ಅಧಿಕಾರ ಸ್ಪೀಕರ್ ಆಗಿ ನಿಮಗೆ ಇದೆ” ಎಂದು ಹೇಳಿದ್ದರು.
ಶಾಸಕ ವಹೀದ್ ವಿರುದ್ಧ ಬಿಜೆಪಿ ಕಿಡಿ
ಆದರೆ ನಿರ್ಣಯ ಮಂಡನೆ ಮಾಡುತ್ತಿದ್ದಂತೆಯೇ 28 ಬಿಜೆಪಿ ಶಾಸಕರು ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು. ವಿಧಾನಸಭೆ ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಣಯ ಮಂಡನೆ ಮಾಡಿದ್ದಕ್ಕಾಗಿ ವಹೀದ್ ಪಾರಾ ಅವರನ್ನು ಅಮಾನತು ಮಾಡಬೇಕು ಎಂದು ಬಿಜೆಪಿ ಶಾಸಕ ಶಾಮ್ ಲಾಲ್ ಶರ್ಮಾ ಒತ್ತಾಯಿಸಿದರು. ಗದ್ದಲ ನಡೆಸುತ್ತಿದ್ದ ಶಾಸಕರು ತಮ್ಮ ಸ್ಥಾನಗಳಿಗೆ ಮರಳಿ ಕೂರುವಂತೆ ಸ್ಪೀಕರ್ ಮನವಿ ಮಾಡಿದರೂ, ಪ್ರತಿಭಟನೆ ಮುಂದುವರಿದಿತ್ತು. ಈ ನಿರ್ಣಯ ಇನ್ನೂ ತಮ್ಮ ಮುಂದೆ ಬಂದಿಲ್ಲ. ಬಂದಾಗ ಅದನ್ನು ಪರಿಶೀಲಿಸುವುದಾಗಿ ಸ್ಪೀಕರ್ ತಿಳಿಸಿದರು.