ಜಿಲ್ಲೆಸುದ್ದಿ

ವಿವಿ ಪುರಂನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ; ಟೈಲ್ಸ್ ಅಂಗಡಿ ಭಸ್ಮ..!

ಬೆಂಗಳೂರು: ವಿವಿ ಪುರಂನಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಆರ್‌ವಿ ರಸ್ತೆಯಲ್ಲಿರುವ ಟೈಲ್ಸ್ ಅಂಗಡಿಯೊಂದು ಬೆಂಕಿಗಾಹುತಿಯಾಗಿದೆ. ಮುಂಜಾನೆಯೇ ಕಾಣಿಸಿಕೊಂಡ ಬೆಂಕಿಯ ಜ್ವಾಲೆಗಳು ಕ್ಷಣಾರ್ಧದಲ್ಲಿ ಅಂಗಡಿಯಾದ್ಯಂತ ವ್ಯಾಪಿಸಿದ್ದು, ಸುತ್ತಮುತ್ತಲಿನ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಸತತ ಕಾರ್ಯಾಚರಣೆಯ ಮೂಲಕ ಬೆಂಕಿಯನ್ನು ಹತೋಟಿಗೆ ತರುವ ಪ್ರಯತ್ನ ನಡೆಸುತ್ತಿದ್ದಾರೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಪ್ರಾಥಮಿಕ ಮಾಹಿತಿಯಲ್ಲಿ ಖಚಿತಪಡಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಬೆಂಕಿ ಮತ್ತಷ್ಟು ಹರಡದಂತೆ ತಡೆಯಲು ಅಗ್ನಿಶಾಮಕ ಅಧಿಕಾರಿಗಳ ಸೂಚನೆಯಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿದೆ. ಟೈಲ್ಸ್ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿವೆ ಎಂದು ಅಂದಾಜಿಸಲಾಗಿದೆ.

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ದಟ್ಟವಾದ ಹೊಗೆಯಿಂದಾಗಿ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಕೂಲಿಂಗ್ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

Comments (0)

Your email address will not be published. Required fields are marked *

Back to top button