ಮೋದಿ ಫೋಟೋಗೆ ಸೀರೆ ಉಡಿಸಿ ಅವಮಾನ; ಎಫ್ಐಆರ್ ದಾಖಲು!

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ವಿಕೃತವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಿಡಿಗೇಡಿಯೊಬ್ಬ ಪ್ರಧಾನಿಯವರ ಫೋಟೋಗೆ ಸೀರೆ ಉಡಿಸಿರುವಂತೆ ಎಡಿಟ್ ಮಾಡಿ ಅವಮಾನಿಸಿದ್ದು, ಈ ಕುರಿತು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂ.ಡಿ. ನಬಿ ಕೊತ್ವಾಲ್ ಎಂಬ ಹೆಸರಿನ ಎಕ್ಸ್ ಖಾತೆಯಿಂದ ಈ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿದ್ದು, ಅದೇ ವ್ಯಕ್ತಿ ಇದನ್ನು ತನ್ನ ವಾಟ್ಸಾಪ್ ಸ್ಟೇಟಸ್ ಕೂಡ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಬಂಧಿತ ವ್ಯಕ್ತಿ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿಯೊಂದಿಗೆ ಕೈಕುಲುಕುತ್ತಿರುವ ಫೋಟೋವನ್ನು ಬಳಸಿಕೊಂಡು, ಅದಕ್ಕೆ ವಿಕೃತ ರೂಪ ನೀಡಿದ್ದಾನೆ. ಅಲ್ಲದೆ, “ಇಸ್ರೇಲ್ ಈಸ್ ದಿ ಫಾದರ್ ಲ್ಯಾಂಡ್, ಇಂಡಿಯಾ ಮದರ್ ಲ್ಯಾಂಡ್” ಎಂಬ ಬರಹವನ್ನು ಪೋಸ್ಟ್ ಮಾಡುವ ಮೂಲಕ ಸಾರ್ವಜನಿಕವಾಗಿ ಅವಹೇಳನ ಮಾಡಿದ್ದಾನೆ. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯ ಬಗ್ಗೆ ಇಂತಹ ಕೆಳಮಟ್ಟದ ಪೋಸ್ಟ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಅವಹೇಳನಕಾರಿ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್ಟೇಬಲ್ ರವಿ ರಾಠೋಡ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಭಂಗ ತರುವ ಮತ್ತು ವ್ಯಕ್ತಿತ್ವ ಹರಣ ಮಾಡುವ ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ಪೊಲೀಸರು ಈ ಖಾತೆಯ ಹಿಂದಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಮುಂದಿನ ತನಿಖೆ ಕೈಗೊಂಡಿದ್ದಾರೆ.




