ಬೆಂಗಳೂರು: ಬೆಂಗಳೂರಿನಲ್ಲಿ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು, ಕುಂದು ಕೊರತೆಗಳನ್ನು ಬಿಡಿಎ ಬೇಗ ಇತ್ಯರ್ಥ ಮಾಡಲ್ಲ.. ಕಚೇರಿಗಳಿಗೆ ಸಿಕ್ಕಾಪಟ್ಟೆ ಅಲೆಯಬೇಕು ಎಂಬ ದೂರು ಸಾಮಾನ್ಯ.. ಆದರೆ ಈಗ ಇದಕ್ಕೆಲ್ಲಾ ಇತಿಶ್ರೀ ಹಾಡಲು BDA ಕಮಿಷನರ್ ಮಣಿವಣ್ಣನ್ ಸ್ವತಃ ಮುಂದಾಗಿದ್ದಾರೆ
ಬಿಡಿಎ ಗ್ರಾಹಕರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು BDA ಕಮೀಷನರ್ ಹೊಸ ಯೋಜನೆಯೊಂದನ್ನು ಪ್ರಕಟಿಸಿದ್ದಾರೆ. ಬಿಡಿಎಯಲ್ಲಿ ಬಹಳ ದಿನಗಳಿಂದ ಇತ್ಯರ್ಥವಾಗದ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಸದಾವಕಾಶ ಕಲ್ಪಿಸಿದ್ದಾರೆ. ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸಿದ 30 ದಿನದಲ್ಲಿ ಬಗೆಹರಿಸುವ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರೀಸ್ ಅಧ್ಯಕ್ಷತೆಯಲ್ಲಿ ನಡೆಯುವ ಮುಕ್ತ ಸಭೆಯಲ್ಲಿ ನಿಮ್ಮನ್ನು ಮುಖಾಮುಖಿಯಾಗಿಸಿ ಸಮಸ್ಯೆ ಇತ್ಯರ್ಥ ಪಡಿಸಲಾಗುತ್ತದೆ ಎಂದು ಬಿಡಿಎ ಆಯುಕ್ತ ಮಣಿವಣ್ಣನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಬಿಡಿಎ ಕಮಿಷನರ್ ಮಣಿವಣ್ಣನ್ ಹೇಳಿದ್ದೇನು?
– ಬಿಡಿಎ ಆಸ್ತಿಯ ಹಕ್ಕುದಾರರು ಸಮಸ್ಯೆ ಇದ್ದಲ್ಲಿ ವಾಟ್ಸಪ್ ಮಾಡಬೇಕು
– ಬಿಡಿಎ ವಾಟ್ಸಪ್ ಸಂಖ್ಯೆ 95831-66622 ಮೂಲಕ ಸಮಸ್ಯೆ ತಿಳಿಸಬೇಕು
– ಕಾನೂನು ಪ್ರಕಾರ ಸರಿಯಾಗಿರುವ ದಾಖಲೆಗಳನ್ನು ವಾಟ್ಸಪ್ ನಲ್ಲಿ ಸಲ್ಲಿಸಬೇಕು
– ವಾಟ್ಸಪ್ ಮೂಲಕ ಅರ್ಜಿಯನ್ನು ದೂರುದಾರರು ಬಿಡಿಎಗೆ ಸಲ್ಲಿಸಬೇಕು
– ಅರ್ಜಿ ಪರಿಶೀಲನೆ ನಂತರ 30 ದಿನದೊಳಗೆ ನಿಮಗೆ ಸಂದೇಶ ಬರುತ್ತದೆ
– ಬಿಡಿಎ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಮುಕ್ತ ಸಭೆಗೆ ಆಹ್ವಾನಿಸಲಾಗುತ್ತದೆ
– ಅಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತ ಚರ್ಚೆ ನಡೆಸಲಾಗುತ್ತದೆ
– ಕಾನೂನು ತೊಡಕುಗಳು ಇಲ್ಲದಿದ್ದರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ
ಹೀಗಂತ ಬಿಡಿಎ ಆಯುಕ್ತ ಮಣಿವಣ್ಣನ್ ಅವರು ಟ್ವೀಟ್ ಮಾಡಿದ್ದಾರೆ. ಆದರೆ, ವಾಟ್ಸಪ್ ಮೂಲಕ ದೂರು ನೀಡಲು ಒಂದಿಷ್ಟು ಷರತ್ತುಗಳು ಇವೆ. ಅವೇನು ಎಂಬುದನ್ನು ನೋಡೋಣ
ಬಿಡಿಎ ಷರತ್ತುಗಳು ಏನು?
– ದೀರ್ಘಕಾಲದಿಂದ ಪರಿಹಾರವಾಗದ ಸಮಸ್ಯೆ ಆಗಿರಬೇಕು
– ಕಾನೂನಿನ ಚೌಕಟ್ಟಿನಲ್ಲಿ ಪರಿಹಾರವಾಗುವಂತೆ ಇರಬೇಕು
– ಕಾನೂನು ವ್ಯಾಜ್ಯಗಳಿರುವ ಪ್ರಕರಣಗಳನ್ನು ಪರಿಗಣಿಸಲ್ಲ..
ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಸಿಗುವ ಪ್ರಕರಣಗಳು ದೀರ್ಘಕಾಲದಿಂದ ಇತ್ಯರ್ಥವಾಗದ ಪಕ್ಷದಲ್ಲಿ, ಗ್ರಾಹಕರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು, ಶೀಘ್ರ ಪರಿಹಾರ ಕಂಡುಕೊಳ್ಳಲು ಈ ಯೋಜನೆಯನ್ನು ಬಿಡಿಎ ಆಯುಕ್ತರು ಪ್ರಕಟಿಸಿದ್ದಾರೆ. ಬಿಡಿಎ ಕಮೀಷನರ್ ಮಣಿವಣ್ಣನ್ ಅವರ ಹೊಸ ಯೋಜನೆಯನ್ನು ಬೆಂಗಳೂರಿನ ಮಂದಿ ಸ್ವಾಗತಿಸಿದ್ದಾರೆ.


