ದಾವಣಗೆರೆ : ಕೇವಲ 5 ರೂ. ಕುರ್‌ ಕುರೆ ವಿಚಾರವಾಗಿ ನಡೆದ ಗಲಾಟೆಯಿಂದ 25 ಜನ ಊರು ಬಿಟ್ಟಿದ್ದಾರೆ! ದಾವಣಗೆರೆಯ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಎರಡು ಕುಟುಂಬಗಳ ಮಧ್ಯೆ ಹೊಡೆದಾಟ ನಡೆದಿದ್ದು, ಗಲಾಟೆ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. 10ಕ್ಕೂ ಹೆಚ್ಚು ಜನ ಆಸ್ಪತ್ರೆ ಪಾಲಾಗಿದ್ದಾರೆ.

ಕುರ್ ಕುರೆ ಪ್ಯಾಕೇಟ್ ವಿಚಾರಕ್ಕೆ ಹೊನ್ನೇಬಾಗಿಯ ಅತೀಫ್ ಉಲ್ಲಾ ಹಾಗೂ ಸದ್ದಾಂ ಕುಟುಂಬದ ನಡುವೆ ಮಾರಾಮಾರಿಯಾಗಿದೆ. ಅತೀಫ್ ಉಲ್ಲಾ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ. ಅದೇ ಅಂಗಡಿಯಲ್ಲಿ ಸದ್ದಾಂ ಕುಟುಂಬದ ಮಕ್ಕಳು ಕುರ್ ಕುರೆ ಖರೀದಿ ಮಾಡಿದ್ದರು. ಆದರೆ ಅವಧಿ ಮುಗಿದ ಕುರ್ ಕುರೇ ಮಾರಾಟ ಮಾಡಿದ್ದೀಯಾ, ಬೇರೆಯದನ್ನು ಕೊಡು ಎಂದು ಕೇಳಿದ್ದಕ್ಕೆ ಗಲಾಟೆ ನಡೆದಿದೆ. ಈ ಸಂಬಂಧ ಸದ್ದಾಂ ಕುಟುಂಬಸ್ಥರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಇದೇ ವಿಚಾರಕ್ಕೆ ದ್ವೇಷ ಸಾಧಿಸಿದ ಅತೀಫ್ ಕುಟುಂಬಸ್ಥರು, ರಸ್ತೆ ಬದಿ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಸದ್ದಾಂ ಕುಟುಂಬದ ಮೇಲೆ ಏಕಾಏಕಿ ಕಾರಿನಲ್ಲಿ ಬಂದು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ದೊಣ್ಣೆ ಹಿಡಿದು 20 ಕ್ಕೂ ಹೆಚ್ವು ಜನರು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೂ ಹಲ್ಲೆ ಮಾಡುವ ಸಂದರ್ಭದಲ್ಲಿ ಬಿಡಿಸಲು ಬಂದವರ ಮೇಲೆಯೂ ಹಲ್ಲೆ ನಡೆಸಿದ್ದು, ಗಾಯಗೊಂಡವರನ್ನು ಚನ್ನಗಿರಿ, ಭದ್ರಾವತಿ ಹಾಗೂ ಶಿವಮೊಗ್ಗ ಅಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಎರಡು ಕುಟುಂಬದಿಂದ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 20 ಕ್ಕೂ ಹೆಚ್ಚು ಜನರು ಬಂಧನ ಭೀತಿಯಿಂದ ಗ್ರಾಮವನ್ನು ತೊರೆದಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

By Veeresh

Leave a Reply

Your email address will not be published. Required fields are marked *

Verified by MonsterInsights