ಬೆಂಗಳೂರು : ಕನ್ನಡ ನಾಮಫಲಕ್ಕಾಗಿ ಕರುನಾಡಲ್ಲಿ ಕಹಳೆ ಮೊಳಗಿದೆ. ನಿರಂತರ ಹೋರಾಟ ಮಾಡುತ್ತಿರುವ ಕನ್ನಡ ಪರ ಸಂಘಟನೆ ಮುಖಂಡರ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗುತ್ತಿವೆ. ಈಗಾಗಲೇ ಹತ್ತು ಮಂದಿ ವಿರುದ್ಧ ಎಫ್ ಐ ಆರ್ ರಿಜಿಸ್ಟರ್ ಆಗಿದ್ದು, 53 ಮಂದಿಯನ್ನ ಬಂಧಿಸಲಾಗಿದೆ.
ಕರುನಾಡ ಮಣ್ಣಲ್ಲಿ ಕನ್ನಡಿಗರೇ ಸಾರ್ವಭೌಮ ಎಂಬ ಘೋಷಣೆಯೊಂದಿಗೆ ಪ್ರತಿ ಅಂಗಡಿಗಳ ಕನ್ನಡ ರಹಿತ ನಾಮಫಲಕದ ಆಂಗ್ಲ ಲಿಪಿಗಳನ್ನ ಛಿದ್ರ ಛಿದ್ರ ಮಾಡಿ ರಾಜ್ಯದಲ್ಲಿ ಅಬ್ಬರಿಸುತ್ತಿರೋ ಕರವೇ ಸಂಘಟನೆ ವಿರುದ್ಧ ದೂರುಗಳು ದಾಖಲಾಗುತ್ತಿವೆ.

ಬೆಂಗಳೂರಿನ ಪ್ರತಿ ಗಲ್ಲಿ ಗಲ್ಲಿಗೂ ಕರವೇ ಕಾರ್ಯಕರ್ತರು ನುಗ್ಗಿ ಜನರನ್ನ ಭಾಷೆಯ ಸಂಬಂಧ ಎಚ್ಚರಿಸುತ್ತಿರೋದಲ್ಲದೆ ,ಅಂಗಡಿ ಮುಂಗಟ್ಟುಗಳ ಮುಂದೆ ರೋಷಾವೇಶದಿಂದ ಕನ್ನಡ ಫಲಕ್ಕಾಗಿ ಪಟ್ಟು ಹಿಡಿದಿದ್ದಾರೆ.
ಕೆಲವೆಡೆ ಕರವೇ ಕಾರ್ಯಕರ್ತರು ದಾಂಧಲೆ ನಡೆಸುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕರೆವೇ ರಾಜ್ಯಾಧ್ಯಕ್ಷ ನಾರಾಯಣ ಗೌಡನನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ಹೋರಾಟದ ತೀವ್ರತೆಯನ್ನ ಹತ್ತಿಕ್ಕೋ ಪ್ರಯತ್ನ ಪಟ್ಟರಾದ್ರು ,ಅರೆಸ್ಟ್ ಆದ ಕೆಲವೇ ಕ್ಷಣದಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆಗಳು ಶುರುವಾದವು.
ಸರಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ.
ಪ್ರತಿಭಟನೆಗೆ ಅವಕಾಶ ಕೊಡದೆ ಕರವೇ ಕಾರ್ಯಕರ್ತರನ್ನ ಬಂಧನ ಮಾಡುತ್ತಿರೋ ಪೊಲೀಸ್ ಇಲಾಖೆ ವಿರುದ್ಧ ಕಿಡಿ ಕಾರಿದ ಕರವೇ ಅಧ್ಯಕ್ಷ ಸಿದ್ಧರಾಮಯ್ಯ ಸರ್ಕಾರದ ವಿರುದ್ಧವೂ ಕೆಂಡಾಮಂಡಲರಾಗಿದ್ದಾರೆ ,ಇನ್ನು ಕರವೇ ಬೆಂಬಲಕ್ಕೆ ನಿಂತಿರೋ ರಾಜ್ಯ ಬಿಜೆಪಿ ಕೂಡ ಸರ್ಕಾರದ ವಿರುದ್ಧ ಗುಡುಗಿದೆ.
ಇನ್ನೂ ನೂರು ಬಾರಿ ಜೈಲಿಗೆ ಕಳುಹಿಸಿದರೂ ಹೆದರಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂಪ್ರವಾಸ ಮಾಡಿ, ಕನ್ನಡ ಇಲ್ಲದ ನಾಮಫಲಕಗಳನ್ನು ಕಿತ್ತೊಗೆಯುತ್ತೇವೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕನ್ನಡ ಪ್ರೇಮಿಗಳೆಂದು ಚುನಾವಣೆ ವೇಳೆ ಅವರ ಪಕ್ಷಕ್ಕೆ ಬೆಂಬಲ ನೀಡಿದ್ದೆವು. ಆದರೆ, ಇದೊಂದು ಬೂಟಾಟಿಕೆ ಸರಕಾರ,” ಎಂದು ಕರವೇ ನಾರಾಯಣಗೌಡ ಕಿಡಿಕಾರಿದರು.

ಕನ್ನಡ ನಾಮಫಲಕ ಅಳವಡಿಸುವ ವಿಚಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಸಂಬಂಧ 10 ಎಫ್ಐಆರ್ ದಾಖಲು ಮಾಡಲಾಗಿದ್ದು, ಅಧ್ಯಕ್ಷ ನಾರಾಯಣಗೌಡ ಸೇರಿ 53 ಜನರನ್ನ ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಬೆಂಗಳೂರು ಕಮಿಷನರ್ ಬಿ.ದಯಾನಂದ್ ಹೇಳಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಅವಕಾಶ ಇದೆ. ಆದರೆ ಕಾನೂನು ಸುವ್ಯವಸ್ಥೆ ಕದಡುವಂತಹ ಕೆಲಸ ಮಾಡಬಾರದು ಎಂದು ಕಮಿಷನರ್ ಬಿ ದಯಾನಂದ್ ತಿಳಿಸಿದ್ದಾರೆ.