ಶಿವಗಂಗೆ: ತಮಿಳುನಾಡಿನ ಶಿವಗಂಗಾದಲ್ಲಿ ಎರಡು ಸರ್ಕಾರಿ ಬಸ್ಸುಗಳು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 11 ಮಂದಿ ಸಾವಿಗೀಡಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಶಿವಗಂಗಾದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಜನರು ಸಾವಿಗೀಡಾದ ಘಟನೆ ತೀವ್ರ ದುಃಖ ತಂದಿದೆ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು ಹಾಗೂ ಗಾಯಾಳುಗಳಿಗೆ ತಲಾ ₹50 ಸಾವಿರ ಕೊಡಲಾಗುವುದು ಎಂದು ಮೋದಿ ಹೇಳಿದ್ದಾರೆ.
ಕಾರೈಕುಡಿಯಿಂದ ದೇವಕೊಟ್ಟೆಗೆ ಸಾಗುತ್ತಿದ್ದ ಬಸ್ ಮತ್ತು ದೇವಕೊಟ್ಟೆನಿಂದ ದಿಂಡಿಗಲ್ ಕಡೆಗೆ ಹೊರಟಿದ್ದ ಇನ್ನೊಂದು ಬಸ್ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಬಳಿ ಪರಸ್ಪರ ಢಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಅಪಘಾತ ದುರಂತಕ್ಕೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ದುರಂತಕ್ಕೆ ಸಂತಾಪ ಸೂಚಿಸಿ, ಮೃತಪಟ್ಟವರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ, ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಹಾಗೂ ಸಣ್ಣ ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಸಚಿವ ಕೆ.ಆರ್. ಪೆರಿಯಕರುಪ್ಪನ್ ಹಾಗೂ ಶಿವಗಂಗಾ ಜಿಲ್ಲಾಧಿಕಾರಿಯನ್ನು ಪರಿಹಾರ ಕಾರ್ಯಾಚರಣೆ ನೋಡಿಕೊಳ್ಳಲು ನಿಯೋಜಿಸಲಾಗಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅಪಘಾತಕ್ಕೆ ಸಂತಾಪ ಸೂಚಿಸಿದರು. ರಾಜ್ಯದಲ್ಲಿ ಪದೇಪದೇ ಸಂಭವಿಸುತ್ತಿರುವ ಬಸ್ ಅಪಘಾತಗಳ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.


