ಬೆಂಗಳೂರು : ರಾಜಧಾನಿ ಸುತ್ತಲಿನ ಜಿಲ್ಲೆಗಳ ಉದ್ಯೋಗಿಗಳ ಸುಗಮ ಸಂಚಾರಕ್ಕೆ ಹಾಗೂ ಇಂಟರ್‌ಸಿಟಿ ರೈಲ್ವೆ ಸಂಪರ್ಕ ಅಭಿವೃದ್ಧಿಗೆ ಬೆಂಗಳೂರು- ಮೈಸೂರು ಹಾಗೂ ಬೆಂಗಳೂರು-ತುಮಕೂರು ನಡುವೆ ಶೀಘ್ರ ‘ನಮೋ ಭಾರತ್ ರ್ಯಾಪಿಡ್ ರೈಲು ಸಂಚಾರ ಆರಂಭ ಆಗಲಿದೆ ಎಂದುಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ. ಇದು ರಾಜ್ಯದ ಮೊದಲ ರ್ಯಾಪಿಡ್ ರೈಲು ಆಗಲಿದೆ. ಶನಿವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೈಲ್ವೆ ನಿಲ್ದಾಣದಿಂದ ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಂಡೋ ಟ್ರೇಲಿಂಗ್ ತಪಾಸಣೆ ನಡೆಸಿ ಬಳಿಕ ಕಂಟೋನ್ಮೆಂಟ್ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಇತ್ತೀಚೆಗೆ ದೇಶದ ಮೊದಲ ರ್ಯಾಪಿಡ್ ರೈಲು (ವಂದೇ ಮೆಟ್ರೋ) ಗುಜರಾತ್ ಅಹ್ಮದಾಬಾದ್-ಭುಜ್ ನಡುವೆ ಆರಂಭವಾಗಿತ್ತು. ಅಂತರ್ ನಗರಗಳ ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕೆ ಈ ರೈಲಿನ ಅಗತ್ಯವಿದೆ. ಹೀಗಾಗಿ ರಾಜ್ಯದಲ್ಲಿ ಮೊದಲ ಹಂತದಲ್ಲಿ ಈ ರೈಲನ್ನು ಬೆಂಗಳೂರಿಂದ ತುಮಕೂರು, ಮೈಸೂರಿಗೆ ಆರಂಭ ಮಾಡಲಾಗುವುದು ಎಂದರು. ವಂದೇ ಭಾರತ್ ಶೇ.100: ರಾಜ್ಯದಲ್ಲಿ ವಂದೇ ಭಾರತ್ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಹುತೇಕ ರೈಲುಗಳು ಶೇ.100 ಪ್ರಯಾಣಿಕರಿಂದ ತುಂಬಿವೆ. ಬೆಂಗಳೂರು-ಮದುರೈ: ಚೆನ್ನೈ ರೈಲು ಶೇ.120, ಕಾಚಿಗುಡ ಶೇ.106, ಕೊಯಮತ್ತೂರು ಶೇ.90, ಹುಬ್ಬಳ್ಳಿ- ಪುಣೆ ರೈಲು ಶೇ.65 ಹಾಗೂ ಬೆಂಗಳೂರು ಧಾರವಾಡ ವಂದೇ ಭಾರತ್ ರೈಲು ಶೇ.86 ರಷ್ಟು ಪ್ರಯಾಣಿಕರಿಂದ ಭರ್ತಿ ಆಗುತ್ತಿವೆ ಎಂದು ಸಚಿವರು ತಿಳಿಸಿದರು. ಶೀಘ್ರವೇ ಅಮೃತ್ ಭಾರತ್ 2.0 ನಿರ್ಮಾಣ: ಅಮೃತ್ ಭಾರತ್ ರೈಲು ಸದ್ಯ ಬೆಂಗಳೂರು – ಮಾಲ್ಟಾ ನಡುವೆ ಸಂಚರಿಸುತ್ತಿದ್ದು, ಇದು ಕೂಡ ಹೆಚ್ಚಿನ ಪ್ರಯಾಣಿಕರಿಂದ ಭರ್ತಿಯಾಗುತ್ತಿದೆ. ರೈಲ್ವೆ ಇಲಾಖೆ ಶೀಘ್ರದಲ್ಲೇ ಅಮೃತ್ ಭಾರತ್ ರೈಲುಗಳ ಆವೃತ್ತಿ 2.0 ನ ದೊಡ್ಡ ಪ್ರಮಾಣದ ಉತ್ಪಾದನೆ ಆರಂಭಿಸಲಿದೆ. ಈಗಿನ ರೈಲಿಗಿಂತ ಹೆಚ್ಚಿನ ಸುಧಾರಣೆಗಳೊಂದಿಗೆ ರೈಲನ್ನು ನಿರ್ಮಿಸಲಾಗುವುದು ಎಂದು ಹೇಳಿದರು. ಬಿಇಎಂಎಲ್ ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ವಂದೇ ಭಾರತ್ ಸ್ವೀಪರ್‌ರೈಲನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದ್ದು, ಶೀಘ್ರವೇ ಅದರ ಸಂಚಾರ ಆರಂಭವಾಗಲಿದೆ ಎಂದರು.
ರಾಜ್ಯಕ್ಕೆ ಶೀಘ್ರ ನಮೋ ಭಾರತ್ ರೈಲು!
0
18
RELATED ARTICLES