Top Newsವೈರಲ್ ನ್ಯೂಸ್ಸುದ್ದಿ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್? ಬಿಎಂಆರ್‌ಸಿಎಲ್ ಆಡಿಟ್ ಪೂರ್ಣ

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಗಳು ದಟ್ಟವಾಗಿವೆ. ಕಳೆದ ಬಾರಿ ಶೇ. 5ರಷ್ಟು ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿದ್ದ ಸರ್ಕಾರ, ಈಗ ಬಿಎಂಆರ್‌ಸಿಎಲ್ ನಡೆಸಿದ ಆಂತರಿಕ ಆಡಿಟ್ ವರದಿ ಬಳಿಕ ದರ ಪರಿಷ್ಕರಣೆಗೆ ಮುಂದಾಗುತ್ತಿದೆ. ಮೆಟ್ರೋ ನಿರ್ವಹಣೆ, ಸಿಬ್ಬಂದಿ ವೇತನ ಮತ್ತು ಹೆಚ್ಚುತ್ತಿರುವ ಇಂಧನ ಹಾಗೂ ವಿದ್ಯುತ್ ವೆಚ್ಚಗಳನ್ನು ಸರಿದೂಗಿಸಲು ದರ ಏರಿಕೆ ಅನಿವಾರ್ಯ ಎಂಬ ವಾದ ಕೇಳಿಬರುತ್ತಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಬಿಎಂಆರ್‌ಸಿಎಲ್ ತನ್ನ ಆಂತರಿಕ ಖರ್ಚು-ವೆಚ್ಚಗಳ ಬಗ್ಗೆ ಸಮಗ್ರ ಆಡಿಟ್ ಪೂರ್ಣಗೊಳಿಸಿದ್ದು, ಈ ವರದಿಯನ್ನು ಸರ್ಕಾರದ ಮುಂದಿಡಲು ಸಜ್ಜಾಗಿದೆ. ಮೂಲಗಳ ಪ್ರಕಾರ, ಈ ಹಿಂದೆ ನಿಗದಿಯಾಗಿದ್ದ ಶೇ. 5ರಷ್ಟು ಏರಿಕೆಯಲ್ಲಿ ಅಲ್ಪ ಬದಲಾವಣೆ ಕಂಡುಬರಬಹುದು. ಅಂದರೆ, ಸಾರ್ವಜನಿಕರ ಆಕ್ರೋಶ ತಪ್ಪಿಸಲು ಶೇ. 1 ಅಥವಾ 2ರಷ್ಟು ಮಾತ್ರ ಏರಿಕೆ ಮಾಡಬೇಕೆ ಅಥವಾ ನಿರ್ವಹಣಾ ವೆಚ್ಚದ ದೃಷ್ಟಿಯಿಂದ ಅದಕ್ಕಿಂತ ಹೆಚ್ಚಿನ ದರ ನಿಗದಿ ಮಾಡಬೇಕೆ ಎಂಬ ಗೊಂದಲ ಇನ್ನೂ ಮುಂದುವರಿದಿದೆ.

ದರ ಪರಿಷ್ಕರಣೆಯ ಅಂತಿಮ ನಿರ್ಧಾರಕ್ಕೆ ‘ಹೊಸ ದರ ನಿಗದಿ ಸಮಿತಿ’ಯ ರಚನೆ ಮತ್ತು ಅನುಮೋದನೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಮೆಟ್ರೋ ಬೋರ್ಡ್ ಸಭೆ ನಡೆಸಲು ಕೇಂದ್ರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಮನವಿ ಸಲ್ಲಿಸಲಿದ್ದಾರೆ. ಈ ಬೋರ್ಡ್ ಮೀಟಿಂಗ್ ನಂತರವೇ ಸಾಮಾನ್ಯ ಜನರ ಜೇಬಿಗೆ ಎಷ್ಟು ಕತ್ತರಿ ಬೀಳಲಿದೆ ಎಂಬುದು ಅಧಿಕೃತವಾಗಿ ಹೊರಬೀಳಲಿದೆ.

Comments (0)

Your email address will not be published. Required fields are marked *

Back to top button