Healthಸುದ್ದಿ

ನಕಲಿ ನಂದಿನಿ ತುಪ್ಪಕ್ಕೆ ಇನ್ನು ಚೆಕ್-ಮೇಟ್; ಅಸಲಿತನ ಪತ್ತೆ ಹಚ್ಚಲು ಕೆಎಂಎಫ್ ಹೊಸ ಪ್ಲ್ಯಾನ್!

ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ‘ನಂದಿನಿ’ ಉತ್ಪನ್ನಗಳ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ನಕಲಿ ಉತ್ಪನ್ನಗಳ ಹಾವಳಿಗೆ ಕಡಿವಾಣ ಹಾಕಲು ಕೆಎಂಎಫ್ ವಿನೂತನ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದೆ.

ಇತ್ತೀಚೆಗೆ ನಕಲಿ ನಂದಿನಿ ಉತ್ಪನ್ನಗಳು ಪತ್ತೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಉತ್ಪನ್ನಗಳ ಶ್ರೇಷ್ಠತೆ ಮತ್ತು ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ಯಾಕೆಟ್‌ಗಳ ಮೇಲೆ ಕ್ಯೂಆರ್ ಕೋಡ್ ಅಳವಡಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಈ ತಂತ್ರಜ್ಞಾನದ ಮೂಲಕ ಗ್ರಾಹಕರು ತಾವು ಖರೀದಿಸುವ ಉತ್ಪನ್ನ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಸ್ಥಳದಲ್ಲೇ ಖಚಿತಪಡಿಸಿಕೊಳ್ಳಬಹುದಾಗಿದೆ.

ಆರಂಭಿಕ ಹಂತವಾಗಿ ಈ ಹೊಸ ವ್ಯವಸ್ಥೆಯನ್ನು ನಂದಿನಿ ತುಪ್ಪದ ಪ್ಯಾಕೆಟ್ ಮತ್ತು ಬಾಟಲಿಗಳ ಮೇಲೆ ಜಾರಿಗೆ ತರಲಾಗಿದೆ. ಗ್ರಾಹಕರು ಪ್ಯಾಕೆಟ್ ಮೇಲಿರುವ ಕೋಡ್ ಸ್ಕ್ಯಾನ್ ಮಾಡಿ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿದರೆ, ಆ ತುಪ್ಪದ ತಯಾರಿಕಾ ಘಟಕ, ತಯಾರಾದ ದಿನಾಂಕ ಮತ್ತು ಮಾರುಕಟ್ಟೆ ಕೋಡ್ ಸೇರಿದಂತೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಈ ಕುರಿತು ಮಾಹಿತಿ ನೀಡಿರುವ ಕೆಎಂಎಫ್ ಎಂಡಿ ಶಿವಸ್ವಾಮಿ ಅವರು, “ನಕಲಿ ತುಪ್ಪ ತಡೆಗೆ ಈ ಡಿಜಿಟಲ್ ಪ್ಲ್ಯಾನ್ ಅತಿ ಹೆಚ್ಚು ಸಹಕಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಾಲಿನ ಪುಡಿ ಸೇರಿದಂತೆ ಇತರ ಎಲ್ಲಾ ನಂದಿನಿ ಉತ್ಪನ್ನಗಳಿಗೂ ಈ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು” ಎಂದು ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button