ಗುಂಡ್ಲುಪೇಟೆ: ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ವಿಫಲವಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಯನ್ನೇ ಗ್ರಾಮಸ್ಥರು ಬೋನಿಗೆ ಕೂಡಿ ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ..
ತಾಲೂಕಿನ ಬೊಮ್ಮಲಾಪುರ ಗ್ರಾಮದ ಕೆಇಬಿ ಪಕ್ಕದ ಗಂಗಪ್ಪ ಎಂಬ ರೈತನ ಜಮೀನಿನಲ್ಲಿ ಕೆಲ ತಿಂಗಳಿಂದ ಹುಲಿ-ಚಿರತೆ ಉಪಟಳ ಹೆಚ್ಚಿದ್ದು, ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ರೈತರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಬೋನ್ ಇರಿಸಿತ್ತು. ಬಳಿಕ ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಇತ್ತ ಸುಳಿಯದ ಹಿನ್ನೆಲೆ ರೈತರು ಬೇಸತ್ತಿದ್ದರು.
ಇಂದು ಬೆಳಿಗ್ಗೆ ಹುಲಿ ರೈತರ ಜಮೀನಿನ ಸುತ್ತಮುತ್ತ ಕಾಣಿಸಿಕೊಂಡಿದ್ದ ರಿಂದ ಆತಂಕಗೊಂಡು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಿಗದಿತ ಸಮಯಕ್ಕೆ ಅರಣ್ಯ ಇಲಾಖೆಯವರು ಬಾರದ ಹಿನ್ನೆಲೆ ರೈತರು ರೊಚ್ಚಿಗೆದ್ದು ಸುಮಾರು 10ಕ್ಕೂ ಅಧಿಕ ಮಂದಿ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬೋನಿನಲ್ಲಿ ಕೂಡಿ ದಿಬ್ಬಂಧನ ಹಾಕಿ ಅಸಮಾಧಾನ ಹೊರಹಾಕಿದರು.
ಮಾಹಿತಿ ಅರಿತ ಗುಂಡ್ಲುಪೇಟೆ ವಲಯದ ಎಸಿಎಫ್ ಸುರೇಶ್ ಹಾಗೂ ಬಂಡೀಪುರ ವಲಯದ ಎಸಿಎಫ್ ನವೀನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ರೈತರ ಮನವೊಲಿಸಲು ಪ್ರಯತ್ನಿಸಿದರು. ಹುಲಿ ಸೆರೆ ಹಿಡಿಯುವ ತನಕ ಊರಿನಿಂದ ಹೊರಗೆ ಅರಣ್ಯಾಧಿಕಾರಿಗಳು ಹೋಗಬಾರದು ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.