ಬೆಂಗಳೂರು :
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಆದಿತ್ಯ ಅಮ್ಲಾನ್ ಬಿಸ್ವಾಸ್ ವಿರುದ್ಧ ಕೆಎಎಸ್ ಅಧಿಕಾರಿಯೊಬ್ಬರು ಕಿರುಕುಳ ಆರೋಪ ಹೊರಿಸಿ, ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದಿದ್ದಾರೆ.

ನ್ಯಾಯಾಲಯದ ಆದೇಶದ ಹೊರತಾಗಿಯೂ ತಮ್ಮನ್ನು ಸಸ್ಪೆಂಡ್ ಮಾಡಿ ಉದ್ದೇಶಪೂರ್ವಕವಾಗಿ ತೊಂದರೆ ಕೊಡ್ತಿದ್ದಾರೆ. ನನ್ನ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡ್ತಿದ್ದಾರೆ. ನನಗೆ, ನನ್ನ ಕುಟುಂಬಕ್ಕೆ ಏನಾದರೂ ಆದರೆ ಈ ಇಬ್ಬರು ಐಎಎಸ್ ಅಧಿಕಾರಿಗಳೇ ಹೊಣೆ ಎಂದು ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿ ಎಂಬುವವರು ಸರ್ಕಾರಕ್ಕೆ ಸ್ಫೋಟಕ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ಫ್ರೀಡಂ ಟಿವಿಗೆ ಲಭ್ಯವಾಗಿದೆ.



ಏಪ್ರಿಲ್ 12, 2023ರಂದು ತಮ್ಮನ್ನು ಸರ್ಕಾರ ಅಮಾನತು ಮಾಡಿತ್ತು. ಆಗಸ್ಟ್ 10, 2023ರಂದು ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ನಂತರ ನಾನು ಕರ್ತವ್ಯಕ್ಕೆ ಹಾಜರಾಗಿರುತ್ತೇನೆ. ನನ್ನ ಅಮಾನತು ಆದೇಶಕ್ಕೆ ಕೆಎಟಿ ಕೂಡ ತಡೆ ನೀಡಿದೆ. ಈ ಕುರಿತ ಪ್ರಕರಣವನ್ನ ನ್ಯಾಯಾಲಯ ರದ್ದು ಪಡಿಸಿದೆ. ಆದಾಗಿಯೂ ದುರುದ್ದೇಶದಿಂದ ನನ್ನನ್ನು ಅಮಾನತು ಮಾಡಿ ತೊಂದರೆ ಕೊಡಲಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಡಿಸೆಂಬರ್ 19, 2023ರ ರಾತ್ರಿ 10.15ರಿಂದ 10.30ರವರೆಗೆ ಬೆಂಗಳೂರು ನಗರ ಜಿಲ್ಲೆ ಎಡಿಸಿ ಟಿ.ಎನ್. ಕೃಷ್ಣಮೂರ್ತಿ, ಕಚೇರಿ ಸಹಾಯಕ ಶಿವರಾಜ್, ದಕ್ಷಿಣ ತಹಶೀಲ್ದಾರ್ ಶ್ರೀನಿವಾಸ್, ಬೆಂಗಳೂರು ದಕ್ಷಿಣ ತಾಲೂಕು ರಾಜಸ್ವ ನಿರೀಕ್ಷಕರಾದ ಹರೀಶ್ ಬಾಬು ಎಂಬುವವರು ಆದೇಶ ಜಾರಿ ಮಾಡಲು ಬಂದಾಗ ನನ್ನ ಕುಟುಂಬಸ್ಥರು ಭಯಭೀತರಾಗಿದ್ದಾರೆ. ಇವರಿಗೆ ತಿಳಿಹೇಳಿ ನನಗೆ ನ್ಯಾಯಕೊಡಿಸಬೇಕು ಎಂದು ತಹಶೀಲ್ದಾರ್ ಶಿವಪ್ಪ ಲಮಾಣಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.