ಹಾವೇರಿ: ರಾಣೇಬೆನ್ನೂರಿನಲ್ಲಿ ಪರೀಕ್ಷಾ ಶುಲ್ಕದ ನೆಪವೊಡ್ಡಿ ವಿದ್ಯಾರ್ಥಿನಿಯ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಶಿಕ್ಷಕಿಯ ವಿರುದ್ಧ ಶಿಕ್ಷಣ ಇಲಾಖೆ ಕಠಿಣ ಕ್ರಮ ಜರುಗಿಸಿದೆ. ರಾಣೇಬೆನ್ನೂರಿನ ಬಿಎಜೆಎಸ್‌ಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾರಾ ಜೆಸ್ಸಿಕಾ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ದರ್ಪ ತೋರಿದ್ದ ಶಿಕ್ಷಕಿ ಸುನೀತಾ ಡಿ.ಬಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಸಾರಾ ಜೆಸ್ಸಿಕಾ ಎಂಬ ವಿದ್ಯಾರ್ಥಿನಿ ಸುಮಾರು 30 ಸಾವಿರ ರೂಪಾಯಿ ಕಾಲೇಜು ಶುಲ್ಕ ಬಾಕಿ ಉಳಿಸಿಕೊಂಡಿದ್ದಾಳೆ ಎಂಬ ಕಾರಣಕ್ಕೆ ಆಡಳಿತ ಮಂಡಳಿಯು ಆಕೆಗೆ ಹಾಲ್ ಟಿಕೆಟ್ ನೀಡಲು ನಿರಾಕರಿಸಿತ್ತು. ಶನಿವಾರ ಕನ್ನಡ ಪರೀಕ್ಷೆ ಬರೆಯಲು ಸಾರಾ ಕಾಲೇಜಿಗೆ ಬಂದಾಗ, ಅಲ್ಲಿ ಹಾಜರಿದ್ದ ಶಿಕ್ಷಕಿ ಸುನೀತಾ ಆಕೆಯನ್ನು ಪರೀಕ್ಷಾ ಕೊಠಡಿಗೆ ಸೇರಿಸದೆ ಸತಾಯಿಸಿದ್ದರು. ಅಷ್ಟೇ ಅಲ್ಲದೆ, “ಎಲ್ಲಾ ಕಾಲೇಜಿನವರೂ ಪುಗಸೆಟ್ಟೆ ಕಲಿಸುತ್ತಾರಾ?” ಎಂದು ದರ್ಪದ ಮಾತುಗಳನ್ನಾಡಿ ವಿದ್ಯಾರ್ಥಿನಿಗೆ ಮಾನಸಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ.
ಈ ಗಂಭೀರ ವಿಷಯದ ಬಗ್ಗೆ ರಾಣೇಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ್ ಅಡಿಗ ಅವರು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಶಿಕ್ಷಕಿ ಸುನೀತಾ ಅವರು ಕಾಲೇಜು ಆಡಳಿತ ಮಂಡಳಿಯ ಪರವಾಗಿ ಅನಗತ್ಯ ಹಸ್ತಕ್ಷೇಪ ಮಾಡಿರುವುದು ಹಾಗೂ ವಿದ್ಯಾರ್ಥಿನಿಗೆ ಪರೀಕ್ಷಾ ಅವಕಾಶ ನಿರಾಕರಿಸಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಈ ವರದಿಯ ಆಧಾರದ ಮೇಲೆ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್ ದಂಡಿನ ಅವರು ಶಿಕ್ಷಕಿಯನ್ನು ಅಮಾನತುಗೊಳಿಸಿದ್ದಾರೆ. ಶಿಕ್ಷಣ ಇಲಾಖೆಯ ಈ ಕ್ರಮಕ್ಕೆ ವಿವಿಧ ಸಂಘಟನೆಗಳು ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


