ಡಾಲಿ ಧನಂಜಯ್ ತಮ್ತು ಧನ್ಯತಾ ಅವರ ವಿವಾಹ ನಿಶ್ಚಿತಾರ್ಥ ಕೆಲವೇ ವಾರಗಳ ಹಿಂದಷ್ಟೆ ಸರಳವಾಗಿ ನೆರವೇರಿದೆ. ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯಾತಾ ಪರಸ್ಪರ ಉಂಗುರ ಬದಲಾವಣೆ ಮಾಡಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ಇವರ ಮದುವೆ ಆಮಂತ್ರಣ ಪತ್ರಿಕೆ ರೆಡಿಯಾಗಿದ್ದು, ಆಮಂತ್ರಣ ಪತ್ರಿಕೆಯನ್ನು ಕ್ರಿಯಾಶೀಲವಾಗಿ ಮಾಡುವ ಜೊತೆಗೆ ಅಲ್ಲಿಯೂ ಕನ್ನಡತನ, ಸರಳತೆ ಹಾಗೂ ಮಧ್ಯಮವರ್ಗತನವನ್ನು ಡಾಲಿ ಹಾಗೂ ಧನ್ಯತಾ ಮೆರೆದಿದ್ದಾರೆ.
ಈಗೆಲ್ಲ ಬಗೆಬಗೆಯ ಮದುವೆ ಆಮಂತ್ರಣ ಪತ್ರಿಕೆಗಳು ಬಂದಿವೆ. ಎಲ್ಇಡಿ ಹೊಂದಿರುವ ಆಮಂತ್ರಣ ಪತ್ರಿಕೆಗಳು ಸಹ ಮಾರುಕಟ್ಟೆಯಲ್ಲಿವೆ. ಪ್ರತಿ ಆಮಂತ್ರಣ ಪತ್ರಿಕೆಗೆ ಸಾವಿರಾರು ರೂಪಾಯಿ ಖರ್ಚು ಮಾಡಲಾಗುತ್ತಿದೆ. ಕರ್ನಾಟಕದಲ್ಲಿಯೂ ಸಹ ಹಲವರು ಈ ರೀತಿಯ ದುಬಾರಿ ಆಮಂತ್ರಣ ಪತ್ರಿಕೆಗಳನ್ನು ಮಾಡಿಸಿದ್ದಾರೆ. ಆದರೆ ಡಾಲಿ ಧನಂಜಯ್, ಬಹಳ ಸರಳವಾದ ಆದರೆ ಅಷ್ಟೇ ಸುಂದರವಾದ ಮತ್ತು ಬಹಳ ಆಪ್ತ ಎನಿಸುವಂಥಹಾ ಆಮಂತ್ರಣ ಪತ್ರಿಕೆಗಳನ್ನು ತಮ್ಮ ಮದುವೆಗೆ ಮಾಡಿಸಿದ್ದಾರೆ. ಡಾಲಿ-ಧನ್ಯತಾ ಆಮಂತ್ರಣ ಪತ್ರಿಕೆ ನೋಡಿದರೆ 70-80ರ ದಶಕಕ್ಕೆ ಹೋದಂತೆ ಭಾಸವಾಗುತ್ತದೆ.
ಡಾಲಿ ಧನಂಜಯ್ ಹಾಗೂ ಧನ್ಯತಾ ಮದುವೆ ಮೈಸೂರಿನ ಅರಮನೆ ಮುಂಭಾಗದ ವಸ್ತುಪ್ರದರ್ಶನ ಮೈದಾನದಲ್ಲಿ ಫೆಬ್ರವರಿ 16ರ ಭಾನುವಾರ ಬೆಳಿಗ್ಗೆ 8:30ಕ್ಕೆ ನಡೆಯಲಿದೆ. ಆರತಕ್ಷತೆ ಅದೇ ಮೈಸೂರಿನ ಅರಮನೆ ಮುಂಭಾಗದ ವಸ್ತುಪ್ರದರ್ಶನ ಮೈದಾನದಲ್ಲಿ ಫೆಬ್ರವರಿ 15ರ ಸಂಜೆ 6 ಗಂಟೆಗೆ ನಡೆಯಲಿದೆ.
ಸರಳವಾದ ಪೋಸ್ಟ್ ಕಾರ್ಡ್ ಮಾದರಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಡಿಸೈನ್ ಮಾಡಿದ್ದು, ಆಮಂತ್ರಣ ಪತ್ರಿಕೆಯ ಒಳಗೆ ಸ್ವತಃ ವಧು-ವರರು ಆಪ್ತವಾಗಿ ಪತ್ರ ಬರೆದಿರುವ ರೀತಿಯ ಸಾಲುಗಳನ್ನು ಬರೆಯಲಾಗಿದೆ. ‘ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತಾ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇವೆ. ತಾವು ಎಲ್ಲಿದ್ದರೂ ಜಗದ ಯಾವುದೇ ಮೂಲೆಯಲ್ಲಿ ಇದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ನೀವು ಆಶೀರ್ವದಿಸಬೇಕು. ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ, ಮತ್ತೆಲ್ಲಾ ಕ್ಷೇಮವಷ್ಟೇ. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ ಧನಂಜಯ ಹಾಗೂ ಧನ್ಯತಾ’ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದೆ. ಈ ಬರೆಹ ಸಹ ಕೈಬರಹದ ಫಾಂಟ್ನಲ್ಲಿಯೇ ಇದೆ.