ವಿಧಾನ ಪರಿಷತ್ ಅಧಿವೇಶನದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಅವಹೇಳನಕಾರಿ ಪದ ಬಳಸಿದ ಆರೋಪದ ಹಿನ್ನೆಲೆಯಲ್ಲಿ ಸುವರ್ಣ ಸೌಧದೊಳಗೆ ನುಗ್ಗಿದ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಿಟಿ ರವಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದಾಗಿ ಸುವರ್ಣ ಸೌಧದಲ್ಲಿ ಭಾರೀ ಭದ್ರತಾ ಲೋಪ ಕಂಡುಬಂದಿದೆ.
ಬೆಳಗಾವಿ: ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಳಗಾವಿಯ ಸುವರ್ಣ ಸೌಧದ ಮೊಗಸಾಲೆಯಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ. ವಿಧಾನಪರಿಷತ್ನ ಕಾರಿಡಾರ್ನಲ್ಲಿ ಹೋಗುತ್ತಿರುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಗಲಿಗರು ಏಕಾಏಕಿ ಸಿಟಿ ರವಿಗೆ ಅಡ್ಡ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ನೂರಾರು ಬೆಂಬಲಿಗರು ಘೋಷಣೆ ಕೂಗಿ ಸಿಟಿ ರವಿ ಮೇಲೆ ಮುಗಿಬಿದ್ದಿದ್ದು, ಹಲ್ಲೆಗೆ ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಕೂಡಲೇ ಮಾರ್ಷಲ್ಗಳು, ಕಾರಿಡಾರ್ ಗೇಟ್ ಬಂದ್ ಮಾಡಿದರು. ಹೀಗಾಗಿ ಸಿಟಿ ರವಿ ಅಪಾಯದಿಂದ ಪಾರಾಗಿದ್ದಾರೆ.
ಸಿಟಿ ರವಿ ಆಕ್ರೋಶ
ನಾನು ಇದಕ್ಕೆಲ್ಲ ಹೆದರಿಕೊಂಡು ರಾಜಕಾರಣ ಮಾಡುವವನಲ್ಲ. ನಾನು ಏಕಾಂಗಿಯಾಗಿಯೇ ಎಲ್ಲವನ್ನೂ ಎದುರಿಸುತ್ತೇನೆ. ನನ್ನ ಕೊಲೆ ಮಾಡುವುದಕ್ಕೆ ಸಂಚು ರೂಪಿಸಿಕೊಂಡು ಬಂದಿದ್ದಾರೆ. ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ ಸಿಟಿ ರವಿ, ನಾನು ಆ ರೀತಿ ಪದಬಳಕೆ ಮಾಡಿದ್ದನ್ನ ತೋರಿಸಿ ಎಂದು ಸವಾಲು ಹಾಕಿದರು.
ಸುವರ್ಣಸೌಧದಲ್ಲೇ ಇಂತಹ ಸ್ಥಿತಿ ಇದೆ ಎಂದರೆ ಅರ್ಥಮಾಡಿಕೊಳ್ಳಿ. ಶಾಸಕನಿಗೆ ರಕ್ಷಣೆ ಇಲ್ಲ ಅಂದರೆ, ಜನಸಾಮಾನ್ಯರ ಸ್ಥಿತಿ ಹೇಗಿದೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬಾಣಂತಿಯರ ಸಾವು, ವಕ್ಫ್ ವಿಚಾರ ಡೈವರ್ಟ್ ಮಾಡಲು ಯತ್ನ. ಸರ್ಕಾರದ ಕುಮ್ಮಕ್ಕಿನಿಂದಲೇ ನಮ್ಮ ಮೇಲೆ ದಾಳಿ ನಡೆದಿದೆ ಎಂದು ಕಿಡಿಕಾರಿದರು.
ಎಡಿಜಿಪಿ ಹಿತೇಂದ್ರಗೆ ಬಿಜೆಪಿ ನಾಯಕರ ತರಾಟೆ
ಇನ್ನು ಸಿಟಿ ರವಿ ಮೇಲಿನ ಹಲ್ಲೆ ಯತ್ನಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಎಡಿಜಿಪಿ ಹಿತೇಂದ್ರಗೆ ತರಾಟೆಗೆ ತೆಗೆದುಕೊಂಡಿದ್ದು, ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಗರನ್ನ ಹೇಗೆ ಒಳ ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ನಾಯಕರ ಆಕ್ರೋಶ ಕಂಡು DGP ಹಿತೇಂದ್ರ ಅವರು ತಲೆ ಅಲ್ಲಾಡಿಸುತ್ತಾ ಸುಮ್ಮನೆ ನಿಂತುಕೊಂಡರು.
ಹೆಚ್ಚುವರಿ ಪೊಲೀಸರ ನಿಯೋಜನೆ
ಈ ಗಲಾಟೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ಸುವರ್ಣ ಸೌಧದ ಮುಂಭಾಗದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಮುಖ್ಯಧ್ವಾರದ ಬಳಿ ನೂರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು ಬಂದೋಬಸ್ತ್ ವೀಕ್ಷಣೆ ಮಾಡಿದರು. ಈ ವೇಳೆ ಟಿವಿ9ಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆಗೆ ಬಂದಿದ್ದರಿಂದ ಪೊಲೀಸ್ ಸಿಬ್ಬಂದಿಯನ್ನ ಸ್ಥಳಕ್ಕೆ ಕರೆಯಿಸಿಕೊಂಡಿದ್ದೇವೆ. ಸೌಧದ ಒಳಗೆ ಹೋರಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸುವರ್ಣಸೌಧಕ್ಕೆ ದಿಗ್ಬಂಧನ
ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ಬೆಂಬಲಿಗರು ಸುವರ್ಣಸೌಧದ ಕಾರಿಡಾರ್ನಲ್ಲಿ ಸಿ.ವಿ.ರವಿ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಇದರಿಂದ ಭಾರೀ ಹೈಡ್ರಾಮಾಕ್ಕೆ ಸುವರ್ಣಸೌಧದಲ್ಲಿ ಸಾಕ್ಷಿಯಾಗಿದ್ದು , ಗಲಭೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸುವರ್ಣಸೌಧಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸುವರ್ಣಸೌಧದ ಎಲ್ಲ ಗೇಟ್ಗಳನ್ನ ಬಂದ್ ಮಾಡಲಾಗಿದ್ದು ,ಎಲ್ಲಾ ಫ್ಲೋರ್ಗೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.