Sunday, March 1, 2026
20 C
Bengaluru
Google search engine
LIVE
ಮನೆದೇಶ/ವಿದೇಶಮೂರು ದಿನಗಳ ‘ಆಕಾಶ’ ಪುರಾಣಕ್ಕೆ ಅಂತ್ಯ: ಕಠ್ಮಂಡು ತಲುಪಿ ನಿಟ್ಟುಸಿರು ಬಿಟ್ಟ 180 ಪ್ರಯಾಣಿಕರು!

ಮೂರು ದಿನಗಳ ‘ಆಕಾಶ’ ಪುರಾಣಕ್ಕೆ ಅಂತ್ಯ: ಕಠ್ಮಂಡು ತಲುಪಿ ನಿಟ್ಟುಸಿರು ಬಿಟ್ಟ 180 ಪ್ರಯಾಣಿಕರು!

ದೇವನಹಳ್ಳಿ: ಕೇವಲ ಮೂರು ಗಂಟೆಗಳಲ್ಲಿ ಮುಗಿಯಬೇಕಿದ್ದ ವಿಮಾನ ಪ್ರಯಾಣ, ಬರೋಬ್ಬರಿ ಮೂರು ದಿನಗಳ ಕಾಲ ಪ್ರಯಾಣಿಕರನ್ನು ಹೈರಾಣಾಗಿಸಿತ್ತು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ತಾಂತ್ರಿಕ ಕಾರಣಗಳಿಂದ ಮೂರು ರಾಜ್ಯಗಳನ್ನು ಸುತ್ತಿ ಕಂಗಾಲಾಗಿದ್ದ 180 ಪ್ರಯಾಣಿಕರು, ಇಂದು ಅಂತಿಮವಾಗಿ ನೇಪಾಳದ ಕಠ್ಮಂಡು ತಲುಪುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ.

ಗುರುವಾರ ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕಠ್ಮಂಡುವಿನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯವೋ ಅಥವಾ ತಾಂತ್ರಿಕ ಕಾರಣವೋ ಎಂಬ ಸ್ಪಷ್ಟ ಮಾಹಿತಿ ನೀಡದೆ ವಿಮಾನವನ್ನು ಕಠ್ಮಂಡು ತಲುಪುವ ಮೊದಲೇ ವಾಪಸ್ ತರಲಾಗಿತ್ತು. ಇದೇ ರೀತಿ ಎರಡು ದಿನಗಳ ಕಾಲ ಪ್ರಯಾಣಿಕರನ್ನು ಬೆಂಗಳೂರು, ವಾರಣಾಸಿ ಮತ್ತು ಲಕ್ನೋ ವಿಮಾನ ನಿಲ್ದಾಣಗಳ ನಡುವೆ ಅಲೆದಾಡಿಸಲಾಗಿತ್ತು.

ಊಟ, ನೀರು ಮತ್ತು ವಿಶ್ರಾಂತಿಗಾಗಿ ಸರಿಯಾದ ವ್ಯವಸ್ಥೆ ಇಲ್ಲದೆ, ಕನಿಷ್ಠ ವಿಮಾನದ ಹಾರಾಟದ ಬಗ್ಗೆ ನಿಖರ ಮಾಹಿತಿಯೂ ಸಿಗದೆ ಪ್ರಯಾಣಿಕರು ವಿಮಾನ ನಿಲ್ದಾಣದ ಟರ್ಮಿನಲ್ ಒಳಗಡೆ ಪ್ರತಿಭಟನೆ ನಡೆಸಿದ್ದರು. “ಮೂರು ನಿಮಿಷದ ಲ್ಯಾಂಡಿಂಗ್ ಪ್ರಕ್ರಿಯೆಗಾಗಿ ಮೂರು ದಿನಗಳ ಕಾಲ ನಮ್ಮನ್ನು ವಿಮಾನದಲ್ಲೇ ಕೂರಿಸಿ ಗೋಳಾಡಿಸಿದರು” ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದರು.

ಶನಿವಾರ ಬೆಳಗ್ಗೆ 10:30ಕ್ಕೆ ವಿಶೇಷ ವ್ಯವಸ್ಥೆಯಡಿ 180 ಪ್ರಯಾಣಿಕರನ್ನು ಹೊತ್ತ ವಿಮಾನವನ್ನು ಬೆಂಗಳೂರಿನಿಂದ ರವಾನಿಸಿತು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ವಿಮಾನವು ಯಶಸ್ವಿಯಾಗಿ ಕಠ್ಮಂಡು ತಲುಪಿದೆ.

ಇಂದು ಕಠ್ಮಂಡು ತಲುಪಿದ ವಿಮಾನವು ರನ್‌ವೇ ಮೇಲೆ ಇಳಿಯುವ ಮೊದಲು ಆಕಾಶದಲ್ಲಿ ಎರಡು ಬಾರಿ ಸುತ್ತು ಹೊಡೆಯಿತು . ಇದನ್ನು ಕಂಡ ಪ್ರಯಾಣಿಕರು “ಇಂದೂ ಕೂಡ ವಿಮಾನ ಲ್ಯಾಂಡ್ ಆಗುವುದಿಲ್ಲವೇ?” ಎಂಬ ಭೀತಿಗೆ ಒಳಗಾಗಿದ್ದರು. ಆದರೆ, ಅಂತಿಮವಾಗಿ ಪೈಲಟ್ ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡಿದಾಗ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದರು.

ಮೂರು ಗಂಟೆಯ ಪ್ರಯಾಣಕ್ಕೆ ಮೂರು ದಿನಗಳನ್ನು ತೆಗೆದುಕೊಂಡ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ನಡೆ ಈಗ ತೀವ್ರ ಟೀಕೆಗೆ ಗುರಿಯಾಗಿದೆ. ಹಣ ನೀಡಿ ಟಿಕೆಟ್ ಖರೀದಿಸಿದರೂ ಸಮಯಕ್ಕೆ ಸರಿಯಾಗಿ ಗುರಿ ತಲುಪದಿದ್ದಕ್ಕೆ ಮತ್ತು ಸರಿಯಾದ ಮಾಹಿತಿ ನೀಡದಿದ್ದಕ್ಕೆ ವಿಮಾನಯಾನ ಸಂಸ್ಥೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೆಲವರು ಬೇಸತ್ತು ತಮ್ಮ ಪ್ರವಾಸವನ್ನೇ ರದ್ದುಗೊಳಿಸಿ ಮನೆಗೆ ಮರಳಿದ್ದಾರೆ. ಅಂತಿಮವಾಗಿ ಹಠ ಹಿಡಿದು ಕಾಯುತ್ತಿದ್ದ 180 ಪ್ರಯಾಣಿಕರು ಮಾತ್ರ ಇಂದು ನೇಪಾಳದ ಮಣ್ಣಿಗೆ ಕಾಲಿಟ್ಟಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments