ವರಧಿ : ಚಂದ್ರು ಶಿಡ್ಲಘಟ್ಟ, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ : ಖಾಸಗಿ ಶಾಲಾ ಕ್ರೀಡಾಕೂಟದ ವೇಳೆ ವಿದ್ಯುತ್ ಸ್ಪರ್ಶಗೊಂಡು ಪೋಷಕರೋರ್ವ ಸಾವನ್ನಪ್ಪಿದ್ದು 10 ಕ್ಕೂ ಅಧಿಕ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.
ಗೌರಿಬಿದನೂರು ನಗರದ ಶಾರದಾ ಶಾಲೆಯಲ್ಲಿ ಇಂದು ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಸಲುವಾಗಿ ಕ್ರೀಡಾಂಗಣಕ್ಕೆ ಹಾಕಿದ್ದ ಪೆಂಡಾಲ್ ಗೆ ವಿದ್ಯುತ್ ತಂತಿಗಳು ಸ್ಪರ್ಷಿಸಿದೆ. ಇದರಿಂದ ಪೆಂಡಾಲ್ ಸ್ಪರ್ಶಿಸಿದ್ದ ಕೆಲವರಿಗೆ ಇದ್ದಕ್ಕಿದ್ದಂತೆ ವಿದ್ಯುತ್ ಶಾಕ್ ತಗುಲಿದೆ. ಗಾಬರಿಗೊಂಡ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಇದೇ ಸಮಯದಲ್ಲಿ ಪೆಂಡಾಲ್ ಕೆಳಗೆ ಉಳಿದಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯುತ್ ಸ್ಪರ್ಶಿಸಿ ಗಂಭೀರ ವಾತಾವರಣ ಸೃಷ್ಟಿಯಾಗಿದೆ.
ಘಟನೆಯಲ್ಲಿ ನಾಗೇನಹಳ್ಳಿ ನಿವಾಸಿ ರಾಘವೇಂದ್ರ ವಿದ್ಯತ್ ಸ್ಪರ್ಶಿಸಿ ಸಾವನ್ನಪ್ಪಿದ್ದು ಹತ್ತಕ್ಕೂ ಹೆಚ್ಚು ಮಂದಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸದ್ಯ ಸ್ಥಳಕ್ಕೆ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿ ಗೌಡ ಹಾಗೂ ಕ್ಷೇತ್ರದ ಶಿಕ್ಷಣಾಧಿಕಾರಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.