ನವದೆಹಲಿ : 2023-24 ಹಣಕಾಸು ವರ್ಷದಲ್ಲಿ ಬಿಜೆಪಿ ತನ್ನ ಘಟಕಗಳು, ವ್ಯಕ್ತಿಗಳು, ಟ್ರಸ್ಟ್ ಮತ್ತು ಕಾರ್ಪೊರೇಟ್ ಕಂಪನಿಗಳಿಂದ 20 ಸಾವಿರ ರೂ.ಗಿಂತ ಅಧಿಕ ಮೊತ್ತದ ಒಟ್ಟು 2,244 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದರೆ ಕಾಂಗ್ರೆಸ್ (Congress) 289 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ.
ಬಿಜೆಪಿ – 2244
* ಬಿಆರ್‌ಎಸ್ – 580
ಕಾಂಗ್ರೆಸ್ -289
*ವೈಎಸ್‌ಆರ್‌ಸಿಪಿ – 184
ಟಿಡಿಪಿ – 100
ಡಿಎಂಕೆ – 60
ಎಎಪಿ – 11
ಟಿಎಂಸಿ – 6
* ಎಲೆಕ್ಟೋರಲ್ ಬಾಂಡ್ ಸೇರಿ
ಭಾರತದ ‘ಲಾಟರಿ ಕಿಂಗ್’ ಎಂದೇ ಹೆಸರುವಾಸಿಯಾಗಿರುವ ಸ್ಯಾಂಟಿಯಾಗೊ ಮಾರ್ಟಿನ್ ಒಡೆತನದ ಕಂಪನಿಯಾದ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ 2023-24ರಲ್ಲಿ ಬಿಜೆಪಿಗೆ 3 ಕೋಟಿ ರೂ. ದೇಣಿಗೆ ನೀಡಿದೆ. ಫ್ಯೂಚರ್ ಗೇಮಿಂಗ್ ಚುನಾವಣಾ ಬಾಂಡ್‌ಗಳ ಮಾರ್ಗದ ಟಿಎಂಸಿಗೆ 1,610 ಕೋಟಿ ರೂ. ದೇಣಿಗೆ ನೀಡಿತ್ತು. ಸದ್ಯ ಸ್ಯಾಂಟಿಯಾಗೋ ಮಾರ್ಟಿನ್ ಒಡೆತನದ ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿದ್ದು ತನಿಖೆ ನಡೆಯುತ್ತಿದೆ.
ಒಂದು ಹಣಕಾಸು ವರ್ಷದಲ್ಲಿ 20,000 ರೂ.ಗಿಂತ ಹೆಚ್ಚಿನ ದೇಣಿಗೆ ನೀಡಿದ ದಾನಿಗಳ ವಿವರಗಳನ್ನು ರಾಜಕೀಯ ಪಕ್ಷಗಳು ಪ್ರತಿ ವರ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ.
ರದ್ದಾಗಿತ್ತು ಚುನಾವಣಾ ಬಾಂಡ್:
2017–18ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಪರಿಚಯಿಸಿತ್ತು. ಚುನಾವಣಾ ಬಾಂಡ್ ಅಕ್ರಮ ಎಂದು ಹೇಳಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು. ಈ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 2024ರ ಫೆಬ್ರವರಿಯಲ್ಲಿ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವುದು ಅಸಾಂವಿಧಾನಿಕ. ಇದು ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿಯ ಹಕ್ಕಿಗೆ ವಿರುದ್ಧವಾಗಿದೆ. ಗಂಭೀರ ನ್ಯೂನತೆಗಳನ್ನು ಹೊಂದಿದ್ದು ಪಾರದರ್ಶಕತೆಯಿಂದಲೂ ಕೂಡಿಲ್ಲ ಎಂದು ಹೇಳಿ ರದ್ದುಗೊಳಿಸಿತ್ತು.
ಚುನಾವಣಾ ಆಯೋಗಕ್ಕೆ ವಾರ್ಷಿಕ ದೇಣಿಗೆಯ ಮಾಹಿತಿಯನ್ನು ಸಲ್ಲಿಸುವಾಗ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿದವರ ವಿವರಗಳನ್ನು ಸಲ್ಲಿಸಬೇಕಾದ ಅಗತ್ಯ ರಾಜಕೀಯ ಪಕ್ಷಗಳಿಗೆ ಇರಲಿಲ್ಲ.
2018 ಹಾಗೂ ಮಾರ್ಚ್ 2023ರ ನಡುವೆ ಈ ಬಾಂಡ್‌ಗಳ ಮೂಲಕ ಬಿಜೆಪಿಗೆ 5,271 ಕೋಟಿ ರೂ. ಬಂದಿದ್ದರೆ ಕಾಂಗ್ರೆಸ್‌ಗೆ 952 ಕೋಟಿ ರೂ. ದೇಣಿಗೆ ಬಂದಿತ್ತು.


