ವಿಜಯಪುರ : ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜಾಣ ನಡೆ ಪ್ರದರ್ಶಿಸಿದ್ದಾರೆ. ಜಿಲ್ಲಾ ಬಿಜೆಪಿಯಲ್ಲಿನ ಬಿರುಸಿನ ಬಣ ರಾಜಕೀಯದಿಂದಾಗಿ ಚುನಾವಣೆ ಹೊಸ್ತಿಲಲ್ಲಿ ಹೊಸ ಅಧ್ಯಕ್ಷರ ನೇಮಕ ಗೊಂದಲಕ್ಕೆ ಪಕ್ಷದ ವರಿಷ್ಠರು ಕೈ ಹಾಕದೇ ಈ ಹಿಂದಿನ ಜಿಲ್ಲಾಧ್ಯಕ್ಷರಾಗಿದ್ದ ಆರ್.ಎಸ್.ಪಾಟೀಲ್ ಕೂಚಬಾಳ ಅವರನ್ನೇ ಜಿಲ್ಲಾಧ್ಯಕ್ಷರಾಗಿ ಮರುನೇಮಕ ಮಾಡಿ ಮುಂದುವರೆಸಿದ್ದಾರೆ.
ರಾಜ್ಯದಲ್ಲಿ ಬಿಎಸ್ವೈ ಕುಟುಂಬದ ಕಟ್ಟಾ ರಾಜಕೀಯ ವಿರೋಧಿ ಎಂದು ಗುರುತಿಸಿಕೊಂಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ವಿಜಯಪುರ ಜಿಲ್ಲೆಯಲ್ಲೂ ಅಷ್ಟೇ ದೊಡ್ಡ ವಿರೋಧಿ ಬಣವಿದೆ. ಬಿ.ವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ಯತ್ನಾಳ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಮುದ್ದೇಬಿಹಾಳದ ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷರಾಗಿ ಹಾಗೂ ಮತ್ತೊಬ್ಬ ವಿರೋಧಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದು, ಸಹಜವಾಗಿಯೇ ಶಾಸಕ ಯತ್ನಾಳರ ಆಕ್ರೋಶಕ್ಕೆ ಕಾರಣವಾಯಿತು. ಇದು ಕೆಜೆಪಿಯ ಮುಂದುವರಿದ ಭಾಗ -2 ಎನ್ನುವ ಮೂಲಕ ಯತ್ನಾಳ ಸ್ವಪಕ್ಷದ ರಾಜ್ಯ ನಾಯಕರ ನಡೆಗೆ ತೀವ್ರ ವಾಗ್ದಾಳಿ ನಡೆಸಿದ್ದರು. ಈ ವಿಚಾರ ಕೇಂದ್ರದ ವರಿಷ್ಠರಿಗೂ ದೊಡ್ಡ ತೆಲೆನೋವಾಯಿತು.
ಈ ಮಧ್ಯೆ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬಹಳಷ್ಟು ನಾಯಕರ ಹೆಸರುಗಳು ಮುನ್ನೆಲೆಯಲ್ಲಿದ್ದವು. ಯತ್ನಾಳ ವಿರೋಧಿ ಬಣದಲ್ಲಿರುವ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ ಬಿರಾದಾರ, ಮಾಜಿ ಸಚಿವರುಗಳಾದ ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ ಇವರೊಂದಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಯುವ ಮುಖಂಡ ರವಿ ಖಾನಪುರ ಹೀಗೆ ದೊಡ್ಡ ಲಿಸ್ಟ್ ಇತ್ತು.
ಒಂದೆಡೆ ಯತ್ನಾಳ ವಿಚಾರ ಮತ್ತೊಂದೆಡೆ ಸಮೀಪಿಸುತ್ತಿರುವ ಚುನಾವಣೆ ಹಿನ್ನಲೆ ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಮಾಡಿ ಯಾರನ್ನೇ ಆಯ್ಕೆ ಮಾಡಿದರೂ ಬಣ ರಾಜಕಾರಣ ದೊಡ್ಡದಾಗಿ ಚುನಾವಣೆ ಮೇಲೆ ಪರಿಣಾಮ ಬೀರುವುದು ಖಚಿತ ಎಂದು ಅರಿತ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವರಿಷ್ಟರು ಜಿಲ್ಲಾಧ್ಯಕ್ಷ ಸ್ಥಾನ ಬದಲಾವಣೆ ಮಾಡದೇ ಈ ಹಿಂದಿನ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಅವರನ್ನೇ ಮರುನೇಮಕಗೊಳಿಸಿ ಮುಂದುವರೆಸಿದೆ. ಇದರಿಂದ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎನ್ನುವ ಮಾತಿನಂತೆ ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯಾವುದೇ ಬದಲಾವಣೆ ಮಾಡದೇ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜಾಣ ನಡೆ ಪ್ರದರ್ಶಿಸಿದ್ದಾರೆ.