ಬೆಂಗಳೂರು: ಉಪ್ಪಾರ ಸಮಾಜದ ಪ್ರಮುಖ ನಾಯಕರು, ಹಿರಿಯ ಉದ್ಯಮಿ ಹಾಗೂ ಸಮಾಜ ಸೇವಕ ಶ್ರೀ ಡಿ.ವೈ. ಉಪ್ಪಾರ (D.Y. Uppar) ಅವರು ಇಂದು ನಿಧನರಾಗಿದ್ದಾರೆ. ಸಮಾಜದ ಏಳಿಗೆಗಾಗಿ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದ್ದ ಒಬ್ಬ ಸಮಾಜಮುಖಿ ವ್ಯಕ್ತಿತ್ವವನ್ನು ಸಮಾಜ ಇಂದು ಕಳೆದುಕೊಂಡಿದೆ.
ಸಮಾಜ ಸೇವೆಯಲ್ಲಿ ಮುಂಚೂಣಿ
ಡಿ.ವೈ. ಉಪ್ಪಾರ ಅವರು ಕೇವಲ ಯಶಸ್ವಿ ಉದ್ಯಮಿಯಾಗಿ ಮಾತ್ರವಲ್ಲದೆ, ‘ಶ್ರೀ ಡಿ.ವೈ. ಉಪ್ಪಾರ ಎಜುಕೇಶನಲ್ ಅಂಡ್ ಸೋಶಿಯಲ್ ಫೌಂಡೇಶನ್’ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದರು. ಉಪ್ಪಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ, ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ನೀಡುವ ಮೂಲಕ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.
ಇಂದು ಸಾರ್ವಜನಿಕ ದರ್ಶನ
ಅವರ ಪಾರ್ಥಿವ ಶರೀರವನ್ನು ಇಂದು ಬೆಂಗಳೂರಿನ ಹೆಬ್ಬಾಳ – ಕೆ.ಆರ್ ಪುರ ರಿಂಗ್ ರಸ್ತೆಯಲ್ಲಿರುವ ಬಿಇಎಲ್ (BEL) ಕಂಪನಿ ಕಾರ್ಪೊರೇಟ್ ಆಫೀಸ್ ಪಕ್ಕದಲ್ಲಿರುವ ನಿವೇಶನದಲ್ಲಿ (ಮಾನ್ಯತಾ ಟೆಕ್ ಪಾರ್ಕ್ ಎದುರು) ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿದೆ. ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆಯವರೆಗೆ ಅಭಿಮಾನಿಗಳು ಹಾಗೂ ಹಿತೈಷಿಗಳು ಅಂತಿಮ ದರ್ಶನ ಪಡೆಯಬಹುದಾಗಿದೆ.
ನಾಳೆ ಅಂತ್ಯಕ್ರಿಯೆ
ಡಿ.ವೈ. ಉಪ್ಪಾರ ಅವರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ನಾಳೆ (ಗುರುವಾರ) ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಾಡಿನ ಖ್ಯಾತ ಉದ್ಯಮಿ ಹಾಗೂ ದೊಡ್ಡ ಗುತ್ತಿಗೆದಾರರಾಗಿದ್ದ ಶ್ರೀ ಡಿ.ವೈ. ಉಪ್ಪಾರ್ ಅವರ ನಿಧನಕ್ಕೆ ಕರ್ನಾಟಕ ಸರ್ಕಾರದ ನಿವೃತ್ತ ಕಾರ್ಯದರ್ಶಿಗಳಾದ ಶ್ರೀ ಪ್ರಭಾಕರ್ ಚಿಣಿ ಅವರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಹೆಮ್ಮೆಯ ಕನ್ನಡಿಗ:
ಸಂತಾಪ ಸೂಚಿಸಿ ಮಾತನಾಡಿರುವ ಪ್ರಭಾಕರ್ ಚಿಣಿ ಅವರು, “ಡಿ.ವೈ. ಉಪ್ಪಾರ್ ಅವರು ಕೇವಲ ಒಬ್ಬ ಉದ್ಯಮಿಯಷ್ಟೇ ಆಗಿರಲಿಲ್ಲ, ಅವರು ರಾಜ್ಯದಾದ್ಯಂತ ದೊಡ್ಡ ಹೆಸರು ಮಾಡಿದ್ದ ಹೆಮ್ಮೆಯ ಕನ್ನಡಿಗರಾಗಿದ್ದರು. ತಮ್ಮ ಕಠಿಣ ಪರಿಶ್ರಮದ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದರು. ಒಬ್ಬ ದೊಡ್ಡ ಗುತ್ತಿಗೆದಾರರಾಗಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅವರ ಪಾಲು ಮಹತ್ವದ್ದು” ಎಂದು ಸ್ಮರಿಸಿದ್ದಾರೆ.
ಉಪ್ಪಾರ ಅವರ ನಿಧನಕ್ಕೆ ಸಮಾಜದ ವಿವಿಧ ಗಣ್ಯರು, ರಾಜಕೀಯ ನಾಯಕರು ಹಾಗೂ ಉಪ್ಪಾರ ಸಮಾಜದ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ. ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಮಾಹಿತಿಗಾಗಿ ಸಂಪರ್ಕಿಸಿ:
ಲೋಕೇಶಪ್ಪ: 7676760225 / 7676760255


