ಲಕ್ನೋ : ದೇಶದ ಪ್ರತಿಷ್ಠಿತ ದೇವಾಲಯ ರಾಮಮಂದಿರದಲ್ಲಿನ ಬಾಲರಾಮನ ದರ್ಶನವನ್ನು ಭಕ್ತರು ನಿತ್ಯ ಪಡೆಯುತ್ತಿದ್ದಾರೆ. ಇನ್ಮುಂದೆ ಅಯೋಧ್ಯೆ ರಾಮ ಮಂದಿರದ ಪೂಜಾ ಕಾರ್ಯಗಳನ್ನು ನೆರವೇರಿಸುವ ಪುರೋಹಿತರಿಗೆ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.
ರಾಮಮಂದಿರದಲ್ಲಿನ ಬಾಲರಾಮನ ಪೂಜಾ ಕಾರ್ಯಗಳನ್ನು ಮಾಡುವ ಪುರೋಹಿತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಸ್ತ್ರ ಸಂಹಿತೆ ಜಾರಿ ಮಾಡಿದೆ. ಎಲ್ಲ ಪುರೋಹಿತರಿಗೆ ಎರಡು ಸೆಟ್ ಹಳದಿ ನಿಲುವಂಗಿ, ಬಿಳಿ ಧೋತಿಗಳನ್ನು ನೀಡಲಾಗಿದೆ. ಇನ್ಮುಂದೆ ದೇವಾಲಯದಲ್ಲಿ ಇದೇ ಬಟ್ಟೆಗಳನ್ನು ಧರಿಸಿಕೊಂಡು ಪುರೋಹಿತರು, ಬಾಲರಾಮನ ಪೂಜೆ ಮಾಡಬೇಕು. ಇದರ ಜೊತೆಗೆ ಗರ್ಭಗುಡಿಯೊಳಗೆ ಫೋನ್ಗಳ ಬಳಕೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಸೇರಿದಂತೆ ಒಟ್ಟು 14 ಅರ್ಚಕರು ರಾಮಮಂದಿರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಅರ್ಚಕರಿಗೆ ಡ್ರೆಸ್ ಕೋಡ್ ಎನ್ನುವುದು ಇರಲಿಲ್ಲ. ಈಗ ಎಲ್ಲ ಅರ್ಚಕರಿಗೂ ವಸ್ತ್ರ ಸಂಹಿತೆ ಜಾರಿ ಮಾಡಿ ಬಟ್ಟೆಗಳನ್ನು ನೀಡಲಾಗಿದೆ. ರಾಮ ಮಂದಿರದಲ್ಲಿ ಪೂಜೆ ಸಲ್ಲಿಸುವ 14 ಅರ್ಚಕರ ಪೈಕಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು ಬೆಳಗಿನ ಪಾಳಿಗೆ ಏಳು ಪುರೋಹಿತರು, ಮಧ್ಯಾಹ್ನದ ಪಾಳಿಗೆ ಏಳು ಪುರೋಹಿತರು ಇರಲಿದ್ದಾರೆ.
ಈ ಬಗ್ಗೆ ರಾಮ ಜನ್ಮಭೂಮಿ ದೇವಾಲಯದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾತನಾಡಿ, ಪ್ರತಿ ದೇವಾಲಯಕ್ಕೂ ಅದರದೇ ಆದ ಒಂದು ಗುರುತು ಇದೆ. ರಾಮ ಜನ್ಮಭೂಮಿ ದೇವಾಲಯದ ವಿಶಿಷ್ಟತೆ ಮತ್ತು ಅನನ್ಯ ಗುರುತನ್ನು ಪ್ರದರ್ಶಿಸಲು ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದೆ. ಇದೊಂದು ವಿಶಿಷ್ಟತೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.