ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಫೇಲ್ ಯುದ್ಧ ವಿಮಾನ ಹಾರಿಸಿದ್ದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ.
ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶಮಾಡಲು ಭಾರತ ಆಪರೇಷನ್ ಸಿಂಧೂರ್ ನಡೆಸಿದಾಗ, ಪಾಕಿಸ್ತಾನವು ಭಾರತೀಯ ಮಹಿಳಾ ಪೈಲಟ್ ಅನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿತ್ತು. ನಂತರ ಪಾಕಿಸ್ತಾನವು ಪೈಲಟ್ ಅನ್ನು ಶಿವಾಂಗಿ ಸಿಂಗ್ ಎಂದು ಗುರುತಿಸಿತ್ತು. ಭಾರತವು ಒಂದೇ ಒಂಡು ಫೋಟೊ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ಎಲ್ಲಾ ಸುಳ್ಳುಗಳನ್ನು ಬಹಿರಂಗಪಡಿಸಿದೆ.
ಸಶಸ್ತ್ರ ಪಡೆಗಳ ಅಧ್ಯಕ್ಷೆ ಮತ್ತು ಸುಪ್ರೀಂ ಕಮಾಂಡರ್ ಆಗಿರುವ 67 ವರ್ಷದ ದ್ರೌಪದಿ ಮುರ್ಮು ಅವರು ಇಂದು ಹರ್ಯಾಣದ ಅಂಬಾಲಾ ವಾಯುನೆಲೆಗೆ ತೆರಳಿ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಹಾರಾಟ ನಡೆಸಿದ ಬಳಿಕ ಶಿವಾಂಗಿ ಸಿಂಗ್ ಅವರ ಜೊತೆ ದ್ರೌಪದಿ ಮುರ್ಮು ಫೋಟೋ ಕ್ಲಿಕ್ಕಿಸಿದರು. ಶಿವಾಂಗಿ ಸಿಂಗ್ ರಾಷ್ಟ್ರಪತಿ ಮುರ್ಮು ಅವರಿದ್ದ ರಫೇಲ್ ಅನ್ನು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ವಾಯುನೆಲೆಯಲ್ಲಿ ಹಾಜರಿದ್ದ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಮತ್ತೊಂದು ವಿಮಾನವನ್ನು ಹಾರಿಸಿದ್ದಾರೆ.
ಆಪರೇಷನ್ ಸಿಂಧೂರದ ಸಮಯದಲ್ಲಿ ಪಾಕಿಸ್ತಾನ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿತ್ತು. ಅದರಲ್ಲಿ ಶಿವಾಂಗಿ ಸಿಂಗ್ ಅವರನ್ನು ನಾವು ಸೆರೆ ಹಿಡಿದಿದ್ದೇವೆ ಎಂದು ಹೇಳಿತ್ತು. ಪತನಗೊಂಡ ರಫೇಲ್ ಯುದ್ಧ ವಿಮಾನದಿಂದ ಹಾರಿದ್ದ ಶಿವಾಂಗಿ ಸಿಂಗ್ ಅವರನ್ನು ನಾವು ಸೆರೆ ಹಿಡಿದಿದ್ದೇವೆ ಎಂದು ಹೇಳಿತ್ತು.
ಭಾರತ ಇದಕ್ಕೆ ಪ್ರತಿಕ್ರಿಯಿಸಿ ನಮ್ಮ ಯಾವುದೇ ಪೈಲಟ್‌ಗಳನ್ನು ಪಾಕಿಸ್ತಾನ ಸೆರೆ ಹಿಡಿದಿಲ್ಲ. ಕಾರ್ಯಾಚರಣೆ ನಡೆಸಿ ನಮ್ಮ ಎಲ್ಲಾ ಪೈಲಟ್‌ಗಳು ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿಸಿತ್ತು.


