ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದ ಸಂಸದ ಡಾ.ಕೆ.ಸುಧಾಕರ್
ದ್ರಾಕ್ಷಿ ಬೆಳೆಗಾರರಿಗೆ ಹನಿ ನೀರಾವರಿಗೆ ಸಹಾಯಧನ, ಗೊಬ್ಬರ ಖರೀದಿ ಹಾಗೂ ಸಿಂಪಡಣೆ ಯಂತ್ರ ಖರೀದಿಗೆ ಸಹಾಯ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮಾಹಿತಿ
ನವದೆಹಲಿ, ಆಗಸ್ಟ್ 6, ಮಂಗಳವಾರ
ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ದ್ರಾಕ್ಷಿ ಕೃಷಿಯನ್ನು ಪ್ರೋತ್ಸಾಹಿಸಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬೆಳೆಗಾರರಿಗೆ ಹನಿ ನೀರಾವರಿಗಾಗಿ ಸಾಮಾನ್ಯ ವರ್ಗಕ್ಕೆ ಶೇ.75 ಹಾಗೂ ಎಸ್‌ಸಿ/ಎಸ್‌ಟಿ ವರ್ಗಕ್ಕೆ ಶೇ.90 ಸಹಾಯಧನ ನೀಡಲಾಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಸಂಸದ ಡಾ.ಕೆ.ಸುಧಾಕರ್ ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಡಿ, ದ್ರಾಕ್ಷಿ ಬೆಳೆಗಾರರ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತಂದು ಪ್ರಶ್ನೆ ಕೇಳಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರ ಲಿಖಿತ ಉತ್ತರ ನೀಡಿದೆ.
ದ್ರಾಕ್ಷಿ ಬೆಳೆಗಾರರು ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಂದ ಅಪಾರ ನಷ್ಟ ಅನುಭವಿಸಿದ್ದಾರೆ. ಈ ಬೆಳೆಗಾರರಿಗೆ ಪ್ರೋತ್ಸಾಹ ನೀಡಲು ಸರ್ಕಾರ ಯಾವೆಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಉತ್ತರ ನೀಡಿರುವ ಸಚಿವಾಲಯ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ, ಸಾಮಾನ್ಯ ವರ್ಗದ ಬೆಳೆಗಾರರಿಗೆ ಹೆಕ್ಟೇರ್‌ಗೆ ಗರಿಷ್ಠ 24,000 ರೂ. ಹಾಗೂ ಎಸ್‌ಸಿ/ಎಸ್‌ಟಿ ಗೆ ಹೆಕ್ಟೇರ್‌ಗೆ ಗರಿಷ್ಠ 30,000 ರೂ. ಗೊಬ್ಬರ ಸಹಾಯಧನ ನೀಡಲಾಗುತ್ತಿದೆ. ಜೊತೆಗೆ ಪೌಷ್ಠಿಕಾಂಶ ಹಾಗೂ ರೋಗ ನಿಯಂತ್ರಣಕ್ಕಾಗಿ ಹೆಕ್ಟೇರ್‌ಗೆ ಗರಿಷ್ಠ 2,000 ರೂ. ನೀಡಲಾಗುತ್ತಿದೆ. ಕೀಟನಾಶಕ ಮತ್ತು ಗೊಬ್ಬರ ಸಿಂಪಡಣೆಗಾಗಿ ಯಂತ್ರ ಖರೀದಿಗೆ ಸಾಮಾನ್ಯ ವರ್ಗಕ್ಕೆ ಗರಿಷ್ಠ 76,000 ರೂ. ಹಾಗೂ ಎಸ್‌ಸಿ/ಎಸ್‌ಟಿ ಗೆ ಗರಿಷ್ಠ 95,000 ರೂ. ಸಹಾಯಧನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
2021-22 ಹಾಗೂ 2022-23 ನೇ ಸಾಲಿನಲ್ಲಿ ಅತಿಯಾದ ಮಳೆ ಹಾಗೂ ರೋಗಗಳಿಂದಾಗಿ ದ್ರಾಕ್ಷಿ ಬೆಳೆ ಪ್ರದೇಶ ಹಾಗೂ ಉತ್ಪಾದನೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 2022-23 ರಲ್ಲಿ ಚಿಕ್ಕಬಳ್ಳಾಪುರದಲ್ಲಿ 568 ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆದಿದ್ದು, 13,113 ಟನ್ ಉತ್ಪಾದನೆಯಾಗಿದೆ. ಇದೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ 1,712 ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆದಿದ್ದು, 43,086 ಟನ್ ದ್ರಾಕ್ಷಿ ಉತ್ಪಾದನೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಬೆಳೆಗಾರರು ನಷ್ಟ ಪರಿಹಾರ ಪಡೆಯಲು, ಹವಾಮಾನ ಆಧಾರಿತ ಬೆಳೆ ಬಿಮೆ ಯೋಜನೆಗೆ (RWBCIS) ಹೆಸರು ನೋಂದಾಯಿಸಲು ಸಲಹೆ ನೀಡಲಾಗುತ್ತಿದೆ. ಈ ಯೋಜನೆಯಡಿ, ಶೇ.5 ರಷ್ಟು ಅಂದರೆ ಹೆಕ್ಟೇರ್‌ಗೆ 14,000 ರೂ. ವಿಮೆ ಪಾವತಿಸಬೇಕು. ನಷ್ಟವಾದಾಗ ಹೆಕ್ಟೇರ್‌ಗೆ 2.80 ಲಕ್ಷ ರೂ. ಪರಿಹಾರ ಸಿಗಲಿದೆ ಎಂದು ಸಚಿವಾಲಯ ತಿಳಿಸಿದೆ.