ಬೆಂಗಳೂರು : ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಫಲಿತಾಂಶ ಘೋಷಣೆ ನಂತರ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಫಲಿತಾಂಶ ಹೊರಬೀಳುತ್ತಿದ್ದಂತೆ, ಕೆಲ ಕೈ ಕಾರ್ಯಕರ್ತರು, ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯನ್ನ ಕೂಗಿದ್ರು. ಇದನ್ನು ಖಂಡಿಸಿ ವಿಜಯಪುರ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಸಂಚಾಲಕ, ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿರುವ ಡಾ. ಬಾಬು ರಾಜೇಂದ್ರ ನಾಯಿಕ್ ಖಂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನಿರಂತರವಾಗಿ ಭಾರತ ವಿರೋಧಿ ಎಂಬುದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತುಪಡಿಸುತ್ತಾ ಬಂದಿದೆ. ಇದಕ್ಕೆ ವಿಧಾನಸೌಧದ ಆವರಣದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ ಅಷ್ಟೇ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾಸಿರ್ ಹುಸೇನ್ ಅವರು ರಾಜ್ಯಸಭೆಗೆ ಆಯ್ಕೆಯಾದ ಬೆನ್ನಲ್ಲೇ ಅವರ ಬೆಂಬಲಿಗರು ಜಯಘೋಷಗಳನ್ನು ಮೊಳಗಿಸಿದ್ದಾರೆ.
ನಾಸಿರ್ ಹುಸೇನ್ ಅವರಿಗೆ ಜೈಕಾರ ಹಾಕಿದ್ದರೆ ಅದನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಆದರೆ, ಅವರ ಉಪಸ್ಥಿತಿಯಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳು ಮೊಳಗಿದ್ದು ಆ ಪಕ್ಷದ ಮನಸ್ಥಿತಿಯನ್ನು ತೋರಿಸಿದೆ. ಈ ರೀತಿಯ ದೇಶ ವಿರೋಧಿ, ದೇಶದ್ರೋಹಿ ಕೆಲಸಕ್ಕೆ ತಕ್ಕ ಶಿಕ್ಷೆ ಆಗಲೇಬೇಕು. ಆದರೆ ಕಾಂಗ್ರೆಸ್ ಪಕ್ಷ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದ್ದು, ಅವರು ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಲ್ಲ ಎಂದು ಸಾಕ್ಷಿಗಳಿರುವಾಗಲೇ ಸುಳ್ಳು ಹೇಳುತ್ತಿದ್ದಾರೆ. ರಾಷ್ಟ್ರ ಭಕ್ತಿಯೇ ಇಲ್ಲದ ಪಕ್ಷದಿಂದ, ಅದರ ನಾಯಕರಿಂದ ನಾವು ಎಂತಹ ರಾಷ್ಟ್ರ ಸೇವೆ ನಿರೀಕ್ಷಿಸಲು ಸಾಧ್ಯ, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಿದ, ಅದನ್ನು ಬೆಂಬಲಿಸಿದ ಎಲ್ಲ ಕಾಂಗ್ರೆಸ್ಸಿಗರಿಗೆ ನನ್ನ ಧಿಕ್ಕಾರವಿದೆ ಎಂದು ಡಾ.ಬಾಬು ರಾಜೇಂದ್ರ ನಾಯಿಕ್ ಗುಡುಗಿದ್ದಾರೆ.


