ಜಿಲ್ಲೆರಾಜಕೀಯಸುದ್ದಿ

ಅಯೋಗ್ಯರ ಮಾತು ಕೇಳಬೇಡಿ; ಬಾಗಲಕೋಟೆ ಕಲ್ಲು ತೂರಾಟ ಪ್ರಕರಣ ವಿರುದ್ಧ ಪ್ರಲ್ಹಾದ್ ಜೋಶಿ ಕಿಡಿ!

ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟದ ಘಟನೆಯ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಮಸೀದಿಯೊಂದರಲ್ಲಿ 200ಕ್ಕೂ ಹೆಚ್ಚು ಜನರು ಸೇರಿದ್ದರು ಮತ್ತು ಅಲ್ಲಿ ಮಾರಕಾಸ್ತ್ರಗಳು ಸಂಗ್ರಹವಾಗಿವೆ ಎಂಬ ವರದಿಗಳಿದ್ದರೂ ಪೊಲೀಸರು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಬದಲು ರಾಜಕೀಯ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂದು ಆರೋಪಿಸಿದ ಜೋಶಿ, ಇಂತಹ ಕಾರ್ಯವೈಖರಿ ಕಾನೂನು ಸುವ್ಯವಸ್ಥೆಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ. ಹಿಂದೂಗಳ ಮೆರವಣಿಗೆಗಳಿಗೆ ನಿಬಂಧನೆ ಹೇರಿ, ಮತ್ತೊಂದು ಸಮುದಾಯಕ್ಕೆ ವಿಶೇಷ ರಕ್ಷಣೆ ನೀಡುವ ದ್ವಂದ್ವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಖಂಡಿಸಿದ್ದಾರೆ.

ಬಾಗಲಕೋಟೆ ಎಸ್‌ಪಿಯವರನ್ನು ಉದ್ದೇಶಿಸಿ ಮಾತನಾಡಿ, ಐಪಿಎಸ್ ಅಧಿಕಾರಿಯಾದ ನೀವು ‘ಅಯೋಗ್ಯರ’ ಮಾತು ಕೇಳಿ ಅನ್ಯಾಯಕ್ಕೆ ಸಾಕ್ಷಿಯಾಗಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧ ಶಕ್ತಿಗಳ ಹಾವಳಿ ಮಿತಿಮೀರಿದೆ ಎಂದು ಅವರು ದೂರಿದ್ದಾರೆ.

Comments (0)

Your email address will not be published. Required fields are marked *

Back to top button