ಬೆಂಗಳೂರು: ಆಮೀಷಕ್ಕೆ ಒಳಗಾಗದೆ ಸ್ವಇಚ್ಛೆಯಿಂದ ಎಲ್ಲರೂ ಮತ ಚಲಾಯಿಸಬೇಕೆಂದು ವಿದ್ಯಾರ್ಥಿಗಳಲ್ಲಿ ಹಾಗೂ ಎಲ್ಲಾ ಮತದಾರರಿಗೆ ಅರಿವು ಮೂಡಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಕರೆ ನೀಡಿದರು.

ಮಹದೇವಪುರದ ಗುಂಜೂರು ಬಳಿಯಿರುವ ಕೃಪಾನಿಧಿ ಗ್ರೂಫ್ ಆಫ್ ಇನ್ಸಿಟಿಟ್ಯೂಟ್​ನಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸ್ವಇಚ್ಛೆಯಿಂದ ಮುಂದೆ ಬಂದು ಮತದಾನ ಮಾಡಬೇಕೆಂದು ತಿಳಿಸಿದರು.

ನಿಮಗೆ ಮತದಾನ ಮಾಡುವ ಮನಸ್ಸಿದ್ದು, ಅದರ ಬಗ್ಗೆ ಅರಿವಿಲ್ಲ ಎಂದಾದರೆ ಎಲ್ಲರೂ ಮೊದಲು ಮಾಡಬೇಕಾಗಿರುವ ಕೆಲಸ ವೋಟರ್ ಹೆಲ್ಪ್​ಲೈನ್​ ತಂತ್ರಾಂಶವನ್ನು ಡೌನ್​ಲೋಡ್​ ಮಾಡಿಕೊಳ್ಳಬೇಕು. ನಂತರ ತಂತ್ರಾಂಶದಲ್ಲಿ ನಿಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆ ನಮೂದಿಸಿದರೆ ಸಾಕು ಎಲ್ಲಾ ಮಾಹಿತಿ ನಿಮಗೆ ಸಿಗಲಿದೆ ಎಂದು ಮಾಹಿತಿ ನೀಡಿದರು.

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದು, ನೀವು ಮತದಾನ ಮಾಡದಿರುವುದು ತಪ್ಪಾಗುತ್ತದೆ. ಇನ್ನು ನೀವು ಆಮೀಷಕ್ಕೊಳಗಾಗಿ ಮತದಾನ ಮಾಡಿದರೆ ಅದು ಅಪರಾಧವಾಗಲಿದೆ. ನಿಮಗೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿವೇಚನೆಯಿದ್ದು, ನಿಮ್ಮ‌ ವಿವೇಚನೆಯಿಂದ ಮತದಾನ ಮಾಡಲು ತಿಳಿಸಿದರು.

ಚುನಾವಣೆ ಸುಗಮವಾಗಿ ನಡೆಯಲು ಅಧಿಕಾರಿಗಳ ನಿಗಾ:

ಚುನಾವಣೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಎಲ್ಲಾ ಕಡೆ ನಿಗಾವಹಿಸಿ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದಾರೆ. ನಿಮಗೇನಾದರು ಆಮೀಷದ ಕುರಿತು ಮಾಹಿತಿ ಲಭ್ಯವಾದಲ್ಲಿ ಕೂಡಲೆ ಸಿವಿಜಿಲ್ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ನಿಮ್ಮ ಊರುಗಳಿಗೆ ತೆರಳಿ ಮತದಾನ ಮಾಡಿ:

ನಿಮ್ಮ ಮತ ಬೆಂಗಳೂರಿನಲ್ಲಿ ಇಲ್ಲವಾದರೆ ನಿಮ್ಮ ಊರುಗಳಿಗೆ ತೆರಳಿ ಮತದಾನ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಗೌರವ ತರುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಮತದಾನದ ದಿನ ತಮ್ಮ-ತಮ್ಮ ಊರುಗಳಿಗೆ ತೆರಳಿ ತಪ್ಪದೆ ಮತದಾನ ಮಾಡಲು ಕೋರಿದರು.

ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ಮಹದೇವಪುರ ವಲಯ ಆಯುಕ್ತರಾದ ರಮೇಶ್, ವಲಯ ಜಂಟಿ ಆಯುಕ್ತರಾದ ದಾಕ್ಷಾಯಿಣಿ, ಕೃಪಾನಿಧಿ ಕಾಲೇಜಿನ ನಿರ್ದೇಶಕರಾದ ಡಾ. ಸ್ಯಾಮ್ ಫಾಲ್, ಉಪಾಧ್ಯಕ್ಷರಾದ ಗೀತಾ ನಾಗ್ಪಾಲ್, 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

By admin

Leave a Reply

Your email address will not be published. Required fields are marked *

Verified by MonsterInsights