ಅಮೆರಿಕ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಭಾರತವನ್ನು ಸ್ನೇಹಿ ರಾಷ್ಟ್ರವೆಂದು ಪರಿಗಣಿಸಿದರಾದರೂ ಬಿಸಿನೆಸ್ ವಿಷಯಕ್ಕೆ ಬಂದರೆ ನಿಷ್ಠುರವಾದ ಮಂಡಿಸುತ್ತಾರೆ. ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುವ ಉತ್ಪನ್ನಗಳ ಮೇಲೆ ಭಾರತ ತೆರಿಗೆ ಹೇರುವುದರ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿರುವ ಅವರು, ತಮ್ಮ ದೇಶವೂ ಭಾರತೀಯ ಉತ್ಪನ್ನಗಳ ಮೇಲೆ ತೆರಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಅವರು ಯಾವುದಕ್ಕೆ ಎಷ್ಟು ತೆರಿಗೆ ಹಾಕುತ್ತಾರೋ, ನಾವೂ ಅಷ್ಟೇ ತೆರಿಗೆ ಹಾಕಬೇಕಾಗುತ್ತದೆ. ಇದು ಅನುರೂಪ (reciprocal) ನಡೆಯಾಗಬೇಕು. ಅವರು ನಮಗೆಷ್ಟು ತೆರಿಗೆ ಹಾಕುತ್ತಾರೋ ನಾವೂ ಅಷ್ಟೇ ತೆರಿಗೆ ಹಾಕುತ್ತೇವೆ. ಹೆಚ್ಚಿನ ಸಂದರ್ಭಗಳಲ್ಲಿ ಅವರು ತೆರಿಗೆ ಹಾಕುತ್ತಾರೆ. ನಾವು ಅವರಿಗೆ ತೆರಿಗೆ ಹಾಕೋದಿಲ್ಲ. ಇದನ್ನು ಬದಲಾಯಿಸುತ್ತೇವೆ,’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತ, ಬ್ರೆಜಿಲ್ ಮೊದಲಾದ ದೇಶಗಳು ಕೆಲ ಅಮೆರಿಕನ್ ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹಾಕುತ್ತಿವೆ ಎನ್ನುವುದು ಡೊನಾಲ್ಡ್ ಟ್ರಂಪ್ ಅಸಮಾಧಾನವಾಗಿದೆ. ಹಾರ್ಲೀ ಡೇವಿಡ್ಸನ್ ಕಂಪನಿಯ ಬೈಕುಗಳ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಈ ಹಿಂದೆ ಬಹಿರಂಗವಾಗಿಯೇ ಭಾರತವನ್ನು ತರಾಟೆಗೆ ತೆಗೆದುಕೊಂಡಿದ್ದಿದೆ. ಐದಾರು ವರ್ಷದ ಪೂರ್ವದಲ್ಲಿ ಅಮೆರಿಕದ ಹಾರ್ಲೀ ಡೇವಿಡ್ಸನ್ ಬೈಕುಗಳ ಮೇಲೆ ಭಾರತ ಶೇ. 100ರಷ್ಟು ಸುಂಕ ವಿಧಿಸುತ್ತಿತ್ತು. ಬಳಿಕ ಅದನ್ನು ಶೇ. 50ರಷ್ಟು ಕಡಿತಗೊಳಿಸಲಾಯಿತು. ಆದರೂ ಕೂಡ ಅದು ಅತಿಯಾಯಿತು ಎನ್ನುವುದು ಟ್ರಂಪ್ ಅನಿಸಿಕೆ. ಕೆಲ ತಿಂಗಳ ಹಿಂದೆ ಭಾರತದ ಸಚಿವರು ಹಾರ್ಲೀ ಡೇವಿಡ್ಸನ್ ಬೈಕುಗಳ ಮೇಲಿನ ಆಮದು ಸುಂಕವನ್ನು ಮತ್ತಷ್ಟು ಇಳಿಸುವ ಕುರಿತು ಮಾತುಗಳನ್ನಾಡಿದ್ದರು.

‘ಭಾರತದಂತಹ ದೇಶವು ನಮಗೆ ಶೇ. 100ರಷ್ಟು ತೆರಿಗೆ ವಿಧಿಸುತ್ತದೆ. ಅದಕ್ಕೆ ಬದಲಾಗಿ ನಾವು ಅವರಿಗೆ ಏನೂ ಹಾಕಬಾರದಾ? ಅವರು ಬೈಸಿಕಲ್ ಕಳುಹಿಸಿದರೆ ನಾವೂ ಬೈಸಿಕಲ್ ಕಳುಹಿಸುತ್ತೇವೆ. ಅವರು ನಮಗೆ 100 ಮತ್ತು 200 ಚಾರ್ಜ್ ಮಾಡುತ್ತಾರೆ. ಭಾರತ ಸಾಕಷ್ಟು ತೆರಿಗೆ ವಿಧಿಸುತ್ತದೆ. ಬ್ರೆಜಿಲ್ ಸಾಕಷ್ಟು ತೆರಿಗೆ ವಿಧಿಸುತ್ತದೆ. ಅವರು ಬೇಕಾದರೆ ತೆರಿಗೆ ವಿಧಿಸಲಿ ಪರವಾಗಿಲ್ಲ, ಆದರೆ ನಾವೂ ಕೂಡ ಅಷ್ಟೇ ತೆರಿಗೆ ವಿಧಿಸುತ್ತೇವೆ,’ ಎಂದು ಅಮೆರಿಕದ ಫ್ಲೋರಿಡಾ ರಾಜ್ಯದ ಪಾಮ್ ಬೀಚ್ ಕೌಂಟಿಯಲ್ಲಿರುವ ಮಾರ್ ಎ ಲಾಗೋ ಎಂಬಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡುತ್ತಾ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

 

Leave a Reply

Your email address will not be published. Required fields are marked *

Verified by MonsterInsights