ರಾಮನಗರ: ಇಂದು ಚನ್ನಪಟ್ಟಣದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಲಿದ್ದಾರೆ. ದೇವೇಗೌಡರನ್ನು ಪ್ರಚಾರಕ್ಕೆ ಇಳಿಸುವ ಮೂಲಕ ಕಾಂಗ್ರೆಸ್ಗೆ ಕೌಂಟರ್ ಕೊಡುವುದರ ಜತೆಗೆ, ಪಕ್ಷಕ್ಕೆ ಶಕ್ತಿ ತುಂಬುವುದು ದಳಪತಿಗಳ ಯೋಜನೆಯಾಗಿದೆ.
ನೀರಾವರಿ ಭಗೀರಥ ಹೇಳಿಕೆಗೂ ಕೌಂಟರ್ ಕೊಡಲು ಜೆಡಿಎಸ್ನಿಂದ ಸಿದ್ಧತೆ ನಡೆದಿದೆ. ಇಗ್ಗಲೂರು ಡ್ಯಾಂ ಕಟ್ಟಿಸಿದ ಕಾರಣಕ್ಕೆ ಚನ್ನಪಟ್ಟಣ ಅಭಿವೃದ್ಧಿ ಎಂಬ ವಾದ ಜನರ ಮುಂದಿಡಲು ಖುದ್ದು ದೇವೇಗೌಡರನ್ನೇ ಜೆಡಿಎಸ್ ಪ್ರಚಾರ ಕಣಕ್ಕೆ ಇಳಿಸುತ್ತಿದೆ. ಇದರ ಜತೆಗೆ, ಜೆಡಿಎಸ್ನ ಹಳೇ ಮುಖಂಡರನ್ನು ಸಮಾಧಾನ ಮಾಡಿ, ಕಾಂಗ್ರೆಸ್ನಿಂದ ಜೆಡಿಎಸ್ಗೆ ಸೆಳೆಯುವ ತಂತ್ರಗಾರಿಕೆಯೂ ಈ ನಡೆಯ ಹಿಂದಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಚನ್ನಪಟ್ಟಣ ಕೋಡಂಬಳ್ಳಿಯಲ್ಲಿ ಮಾತನಾಡಿದ್ದ ಮಾಜಿ ಸಂಸದ ಡಿಕೆ ಸುರೇಶ್, ನಾಳೆ ಅಂಬ್ಯುಲೆನ್ಸ್ನಲ್ಲಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ದೇವೇಗೌಡರ ಬಗ್ಗೆ ವ್ಯಂಗ್ಯವಾಡಿದ್ದರು. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಜೆಡಿಎಸ್ ‘ಕೈ’ ನಾಯಕರ ವಿರುದ್ಧ ವಾಗ್ದಾಳಿ ನಡೆಸಿತ್ತು.
ಲೋಕಸಭೆ ಚುನಾವಣೆ ಸಂದರ್ಭ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದ ದೇವೇಗೌಡರು, ಇದೀಗ 92ನೇ ವಯಸ್ಸಿನಲ್ಲೂ ಚನ್ನಪಟ್ಟಣದಲ್ಲಿ ಪಕ್ಷದ ಪರ ಪ್ರಚಾರದ ಅಖಾಡಕ್ಕಿಳಿಯುತ್ತಿರುವುದು ವಿಶೇಷ. ಪಕ್ಷದ ಅಭ್ಯರ್ಥಿಯ, ಮೊಮ್ಮಗನ ಗೆಲುವಿಗೆ ಪಣ ತೊಟ್ಟಿರುವ ದೇವೇಗೌಡರು ಪ್ರಚಾರದ ಅಖಾಡದಲ್ಲಿ ಯಾವ ದಾಳ ಉರುಳಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.